ಜನರ ಸಂತಸ ಕಿತ್ತುಕೊಂಡು ಜಿಗುಪ್ಸೆಗೆ ದೂಡುತ್ತಿದೆಯಾ ಸರ್ಕಾರ? - Mahanayaka
6:04 PM Wednesday 30 - October 2024

ಜನರ ಸಂತಸ ಕಿತ್ತುಕೊಂಡು ಜಿಗುಪ್ಸೆಗೆ ದೂಡುತ್ತಿದೆಯಾ ಸರ್ಕಾರ?

31/12/2020

ಬೆಂಗಳೂರು: “ಕೊರೊನಾದ ಬಗ್ಗೆ ಭಯ ಬೇಡ, ಜಾಗೃತಿ ಇರಲಿ”, “ಕೊರೊನಾದೊಂದಿಗೆ ಜೀವಿಸೋಣ” ಮೊದಲಾದ ಸ್ಲೋಗನ್ ಗಳನ್ನು ಬಳಸಿದ್ದ ಸರ್ಕಾರ ಜನರಲ್ಲಿ ಧೈರ್ಯ ತುಂಬಿತ್ತು. ಸದ್ಯ ಜನರಲ್ಲಿ ಯಾವುದೇ ಭಯವಿಲ್ಲದಿದ್ದರೂ ಸರ್ಕಾರ ಮಾತ್ರ ಈಗಲೂ ಕೊರೊನಾದ ಬಗ್ಗೆ ಅನಗತ್ಯವಾಗಿ ಹೆದರಿ, ಸೆಕ್ಷನ್ ಗಳನ್ನು ಜಾರಿ ಮಾಡುತ್ತಿದೆ.

ಬೆಂಗಳೂರಿನಲ್ಲಿ  ಹೊಸ ವರ್ಷ ಪ್ರಯುಕ್ತ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಯಾಗಿದೆ. ಇನ್ನುಳಿದ ಪ್ರದೇಶಗಳಲ್ಲಿ ಇಂದು ಸಂಜೆ 6ರಿಂದ ನಾಳೆ ಬೆಳಗ್ಗೆ 6ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ರೂಪಾಂತರಿ ಕೊರೊನಾ ಹರಡುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಕೂಡ ಹೇಳಿದ್ದಾರೆ.

ಲಾಕ್ ಡೌನ್ ಸಂಕಷ್ಟದ ಬಳಿಕ ನಿಧಾನವಾಗಿ  ಜನರು ಚೇತರಿಸಿಕೊಂಡು ಧೈರ್ಯದಿಂದ ಬದುಕಲು ಆರಂಭಿಸಿದ್ದಾರೆ, ಆದರೆ ಪ್ರತಿ ಬಾರಿಯೂ ಸರ್ಕಾರ ಕೊರೊನಾದ ನೆಪದಲ್ಲಿ ಸಾರ್ವಜನಿಕರ ಸಂತೋಷಗಳನ್ನು ಕಿತ್ತುಕೊಳ್ಳುತ್ತಿದೆ. ಇದನ್ನೇ ಇನ್ನೊಂದು ರೀತಿಯಾಗಿ ವಿಮರ್ಶಿಸುವುದಾದರೆ, ಸರ್ಕಾರವು ಸಾರ್ವಜನಿಕರನ್ನು ಸಂತೋಷಗಳ ದಿನಗಳಂದು ನಿರ್ಬಂಧಿಸಿ ಜಿಗುಪ್ಸೆಗೆ ದೂಡುತ್ತಿದೆ.

ಕ್ರಿಸ್ ಮಸ್ ದಿನದಂದು ರಾಜ್ಯ ಸರ್ಕಾರವು ನೈಟ್ ಕರ್ಫ್ಯೂ ಎಂಬ ಹೆಸರಿನಲ್ಲಿ ದೊಡ್ಡ ಕಾಮಿಡಿ ಶೋ ನಡೆಸಿತ್ತು. ಘೋಷಣೆಯಾಗಿ ಕೆಲವೇ ಸಮಯದಲ್ಲಿ ವಾಪಸ್ ಪಡೆಯಿತು. ಕ್ರಿಸ್ ಮಸ್ ಸಂಭ್ರಮದಲ್ಲಿದ್ದ ಜನರು, ಚರ್ಚ್ ಗೆ ಹೋಗಲು ಕೂಡ ನಮಗೆ ಅವಕಾಶ ಸಿಗುವುದಿಲ್ಲ ಎಂದು ನೊಂದಿದ್ದರು. ಹಬ್ಬದ ಸಂತಸದ ದಿನಗಳಂದು ಸರ್ಕಾರ  ಜನರಿಗೆ ಈ ರೀತಿಯಾಗಿ ಜನರನ್ನು ಹಿಂಸಿಸುವುದು ಸರಿಯೇ ಎಂಬ ಪ್ರಶ್ನೆಗಳು ಇದೀಗ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕೇಳಿ ಬಂದಿದೆ.

ರೂಪಾಂತರಿ ಕೊರೊನಾ ಹರಡುವ ಹಿನ್ನೆಲೆಯಲ್ಲಿ ಹೊಸ ವರ್ಷದಂದು ನಿಷೇಧಾಜ್ಞೆ ಹೊರಡಿಸಲಾಗಿದೆ. ಆದರೆ, ಪ್ರತಿ ದಿನ ನಗರಗಳಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದಾರೆ. ಮಾಲ್ ಗಳಲ್ಲಿ ಜನರು ಸೇರುತ್ತಿದ್ದಾರೆ. ಪ್ರಾರ್ಥನ ಮಂದಿರಗಳಲ್ಲಿ ಜನ ಸೇರುತ್ತಿದ್ದಾರೆ. ಚುನಾವಣೆಗಳು ನಡೆದು, ಚುನಾವಣಾ ಫಲಿತಾಂಶ ಪ್ರಕಟವಾದ ದಿನ ನೂರಾರು ಜನರು ನೆರೆದು ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. ಹೀಗಿರುವಾಗ ಕೇವಲ ಹೊಸ ವರ್ಷಕ್ಕೆ ಮಾತ್ರವೇ ಕೊರೊನಾ ವೈರಸ್ ಹೇಗೆ ತೊಂದರೆ ನೀಡುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಸರ್ಕಾರವು ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಹೊಸ ವರ್ಷಾಚರಣೆಗೆ ಅವಕಾಶ ನೀಡಬೇಕಿತ್ತು. ಅದನ್ನು ಬಿಟ್ಟು ನಿಷೇಧಾಜ್ಞೆ ಹೇರುವ ಮೂಲಕ ಸಾರ್ವಜನಿಕರ ಸಂತಸ ಕಿತ್ತುಕೊಂಡಿದೆ, ಜನರನ್ನು ಪ್ರತಿ ಬಾರಿಯೂ ಜಿಗಪ್ಸೆಗೆ ದೂಡುತ್ತಿದೆ. ಇದು ಉತ್ತಮ ವಾದ ಬೆಳವಣಿಗೆ ಅಲ್ಲ. ಇದು ಜನರ ಆರೋಗ್ಯಕ್ಕೆ ಬೇರೆಯದ್ದೇ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ ಎನ್ನುವ ಅಸಮಾಧಾನಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ