ಯುದ್ಧದ ಕುರಿತ ವರದಿಯಲ್ಲಿ ಇಸ್ರೇಲ್ ‌ಪರ ಗುಣಗಾನ: ನ್ಯೂಯಾರ್ಕ್ ಟೈಮ್ಸ್ ಪತ್ರಿಕಾ ಕಚೇರಿಗೆ ನುಗ್ಗಿ ಫೆಲೆಸ್ತೀನ್ ಪರ ಹೋರಾಟಗಾರರ ಪ್ರತಿಭಟನೆ

10/11/2023

ಇಸ್ರೇಲ್-ಹಮಾಸ್ ಯುದ್ಧದ ವಿಚಾರದಲ್ಲಿ ಮಾಧ್ಯಮಗಳು ಇಸ್ರೇಲ್ ಕಡೆಗೆ ಹೆಚ್ಚು ಒಲವು ತೋತಿಸುತ್ತಿವೆ ಎಂದು ಆರೋಪಿಸಿ ಆಕ್ರೋಶಿತ ಗುಂಪೊಂದು ನ್ಯೂಯಾರ್ಕ್ ಟೈಮ್ಸ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. ಅವರು ‘ದಿ ನ್ಯೂಯಾರ್ಕ್ ಕ್ರೈಮ್ಸ್’ ಎಂಬ ಶೀರ್ಷಿಕೆಯೊಂದಿಗೆ ಅಣಕು ಪತ್ರಿಕೆಗಳನ್ನು ನೆಲದ ಮೇಲೆ ಚೆಲ್ಲಿದರು. ಗಾಝಾದಲ್ಲಿ ಕೊಲ್ಲಲ್ಪಟ್ಟ ಪತ್ರಕರ್ತರು ಸೇರಿದಂತೆ ಸಾವಿರಾರು ಫೆಲೆಸ್ತೀನಿಯರ ಹೆಸರುಗಳನ್ನು ಓದಿದರು.

ನ್ಯೂಯಾರ್ಕ್ ಟೈಮ್ಸ್ ಕಚೇರಿಯನ್ನು ತಲುಪುವ ಮೊದಲು ಸಾವಿರಾರು ಪ್ರತಿಭಟನಾಕಾರರು ಗಾಝಾ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮ್ಮನ್ನು “ರೈಟರ್ಸ್ ಬ್ಲಾಕ್” ಎಂದು ಕರೆದುಕೊಳ್ಳುವ ಜನರ ಸಣ್ಣ ಗುಂಪೊಂದು ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವ ಬ್ಯಾನರ್ ನೊಂದಿಗೆ ನ್ಯೂಯಾರ್ಕ್ ಟೈಮ್ಸ್ ನ ಲಾಬಿಯನ್ನು ಪ್ರವೇಶಿಸಿತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಗಾಝಾದಲ್ಲಿ ಕದನ ವಿರಾಮಕ್ಕೆ ಸಾರ್ವಜನಿಕವಾಗಿ ಕರೆ ನೀಡುವಂತೆ ಕಾರ್ಯಕರ್ತರು ನ್ಯೂಯಾರ್ಕ್ ಟೈಮ್ಸ್ ಆಡಳಿತ ಮಂಡಳಿಗೆ ಕರೆ ನೀಡಿದರು. ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗಿನಿಂದ ದೃಢಪಡಿಸಿದ 36 ಪತ್ರಕರ್ತರು ಸೇರಿದಂತೆ ಗಾಝಾದಲ್ಲಿ ಕೊಲ್ಲಲ್ಪಟ್ಟ ಸಾವಿರಾರು ಫೆಲೆಸ್ತೀನ್ ನಾಗರಿಕರ ಹೆಸರುಗಳನ್ನು ಅವರು ಇದೇ ವೇಳೆ ಓದಿದರು.

ಪತ್ರಿಕಾ ಕಟ್ಟಡದ ಲಾಬಿಯಲ್ಲಿದ್ದ ಪೊಲೀಸರು ಒಂದು ಗಂಟೆಯೊಳಗೆ ಪ್ರದೇಶವನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟವರ ಬಗ್ಗೆ ಯಾವುದೇ ವರದಿಗಳಿಲ್ಲ.
ಆದರೆ ಈ ಪ್ರತಿಭಟನೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಕಟ್ಟಡದ ಹೊರಗೆ ನಿಲ್ಲಿಸಿದ್ದ ನ್ಯೂಯಾರ್ಕ್ ಪೊಲೀಸ್ ಇಲಾಖೆ ವಾಹನದ ಹಿಂಭಾಗದ ಕಿಟಕಿಯನ್ನು ಒಡೆದು ಅದರ ಬದಿಯಲ್ಲಿ ‘ಫ್ರೀ ಗಾಜಾ’ ಎಂದು ಸ್ಪ್ರೇ ಪೇಂಟ್ ಮಾಡಲಾಗಿದೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ನ್ಯೂಯಾರ್ಕ್ ಟೈಮ್ಸ್ ಕಚೇರಿಯ ಸ್ಟಾರ್ ಬಕ್ಸ್ ಅಂಗಡಿಯ ಕಿಟಕಿಯ ಮೇಲೆ ಹೊಗೆ ಬಾಂಬ್ ಎಸೆಯಲಾಗಿದೆ ಮತ್ತು ‘ಫ್ರೀ ಫೆಲೆಸ್ತೀನ್’ ಎಂದು ಬರೆಯಲಾಗಿದೆ ಎಂದು ಕಾನೂನು ಜಾರಿ ಮೂಲಗಳು ದಿ ನ್ಯೂ ಪೋಸ್ಟ್ ಗೆ ತಿಳಿಸಿವೆ.

ಅಕ್ಟೋಬರ್ 7 ರ ಮುಂಜಾನೆ ಬಂಡುಕೋರರ ಗುಂಪು ವಾಯು, ಭೂಮಿ ಮತ್ತು ಸಮುದ್ರದ ಮೂಲಕ ಯಹೂದಿ ರಾಷ್ಟ್ರದ ಮೇಲೆ ದಾಳಿ ನಡೆಸಿದ ನಂತರ ಇಸ್ರೇಲ್, ಗಾಜಾ ಮೇಲೆ ಮಾರಣಾಂತಿಕ ಪ್ರತಿದಾಳಿಯನ್ನು ಪ್ರಾರಂಭಿಸಿತು. ಹಮಾಸ್ ಅನ್ನು ನಿರ್ಮೂಲನೆ ಮಾಡುವುದಾಗಿ ಪ್ರತಿಜ್ಞೆ ಮಾಡಿತು. ನಂತರ ಇಸ್ರೇಲಿ ಸೇನೆಯು ಫೆಲೆಸ್ತೀನ್ ಬಂಡುಕೋರರ ಗುಂಪಿನ ವಿರುದ್ಧ ತನ್ನ ದಾಳಿಯನ್ನು ಪ್ರಾರಂಭಿಸಿತು. ಗಾಝಾದಲ್ಲಿ 10,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ

Exit mobile version