ನಿಮಗೆ ಬೇಕಾದ ಹಾಗೆ ಕೊರೊನಾ ಮಾರ್ಗ ಸೂಚಿ ಮಾಡಿದರೆ ಹುಷಾರ್: ಡಿಕೆಶಿ ಎಚ್ಚರಿಕೆ
02/04/2021
ಬೆಂಗಳೂರು: ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೇ ಸಂದರ್ಭದಲ್ಲಿ ಸರ್ಕಾರವು ತನಗೆ ಬೇಕಾದವರಿಗೆ ಒಂದು ಕಾನೂನು ಬೇರೆಯವರಿಗೆ ಒಂದು ಕಾನೂನು ಮಾಡಿದರೆ ಹುಷಾರ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಶುಕ್ರವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರ ಮಾರ್ಗಸೂಚಿ ಮಾಡಲಿ, ಅದು ಅವರಿಗೂ ಹಾಗೂ ಎಲ್ಲರಿಗೂ ಅನ್ವಯವಾಗುವಂತೆ ಮಾಡಲಿ. ಅವರಿಗೆ ಬೇಕಾದವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗಸೂಚಿ ಮಾಡುವುದು ಬೇಡ. ಇದು ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.
ಸರ್ಕಾರದ ಮಾರ್ಗಸೂಚಿ ಕಾನೂನನ್ನು ಎಲ್ಲರೂ ಪಾಲಿಸಬೇಕು. ಅವರಿಗೆ ಬೇಕಾದಾಗ ಕಾನೂನು ಸಡಿಲ ಮಾಡುವುದು ಬೇಕಾದಾಗ ಕಠಿಣ ಮಾಡುವುದು ಸರಿಯಲ್ಲ. ಆ ರೀತಿ ಮಾರ್ಗಸೂಚಿ ಮಾಡಿದರೆ ನಾವು ನಮ್ಮದೇ ಆದ ರಾಜಕೀಯ ಹೋರಾಟ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.