ನಿನಗೆ ತಾಕತ್ ಇದ್ರೆ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿಸು | ಸಂಸದ ಪ್ರತಾಪ್ ಗೆ ಚಾಟಿ ಬೀಸಿದ ಜಿ.ಟಿ.ದೇವೇಗೌಡ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಹಲವು ದಿನಗಳಿಂದಲೂ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಈ ನಡುವೆ ಶಾಸಕ ಜಿ.ಟಿ.ದೇವೇಗೌಡ ಪ್ರತಾಪ್ ಸಿಂಹಗೆ ಏಕ ವಚನದಲ್ಲಿಯೇ ಸವಾಲು ಹಾಕಿದ್ದಾರೆ.
ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿನಗೆ ತಾಕತ್ತಿದ್ದರೆ ಮೈಸೂರು ಡಿಸಿಯನ್ನು ವರ್ಗಾವಣೆ ಮಾಡಿಸು. ಸುಖಾಸುಮ್ಮನೆ ಹಾದಿಬೀದಿಲಿ ನಿಂತು ಮಾತನಾಡಬೇಡ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ದಿನ ಬೆಳಗಾದರೆ ರೋಹಿಣಿ ಸಿಂಧೂರಿ ವಿರುದ್ಧ ಪತ್ರಿಕೆಗೆ ಸ್ಟೇಟ್‌ಮೆಂಟ್ ಕೊಟ್ಟರೆ ನೀನು ಹುಲಿ ಆಗಲ್ಲ. ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡ. ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ. ನೀನು ಪವರ್‌ಫುಲ್ ಸಂಸದ. ನೀನು ಹೇಳಿದಂತೆ ಪಿಎಂ ಮತ್ತು ಸಿಎಂ ಕೇಳ್ತಾರೆ. ತಾಕತ್ತಿದ್ದರೆ ಜಿಲ್ಲಾಧಿಕಾರಿಯನ್ನ ವರ್ಗಾವಣೆ ಮಾಡಿ ತೋರಿಸು ಎಂದು ಜಿ.ಟಿ.ದೇವೇಗೌಡ ಸವಾಲು ಹಾಕಿದರು.
ಜಿಲ್ಲೆಯ ಶಾಸಕರು ನಿನಗಿಂತ ಹೆಚ್ಚು ಕೆಲಸ ಮಾಡ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದರಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀಯಾ ಹೇಳು? ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸು. ಅದನ್ನು ಬಿಟ್ಟು ಪೇಪರ್ ಸ್ಟೇಟ್‌ಮೆಂಟ್ ಕೊಟ್ಟು ಗೊಂದಲ ಏಕೆ ಮೂಡಿಸ್ತೀಯಾ? ಎಂದು ಜಿ.ಟಿ.ದೇವೇಗೌಡ ತರಾಟೆಗೆತ್ತಿಕೊಂಡರು.
ನಿಮ್ಮ ಹೇಳಿಕೆಯ ಹಿಂದೆ ವೈಯಕ್ತಿಕ ಸಮಸ್ಯೆ ಇದೆ ಎಂದ ಅವರು, ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ. ಒಬ್ಬ ಮಾತ್ರ ಹೀರೋ, ನಾವೆಲ್ಲಾ ಝೀರೋನಾ? ಎಂದು ಪ್ರತಾಪ್ ಸಿಂಹಗೆ ಜಿ.ಟಿ.ದೇವೆಗೌಡ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.