ಹೋಗಮ್ಮ, ನಿಂದು ಒಬ್ಬಳದ್ದೇ ಸಮಸ್ಯೆ ಅಲ್ಲ, ಎಲ್ಲರಿಗೂ ಇದೆ: ಸಂತ್ರಸ್ತರಿಗೆ ಸೋಮಶೇಖರ್, ಜಿ.ಟಿ.ದೇವೇಗೌಡ ಸ್ಪಂದಿಸಿದ್ದು ಹೀಗೆ!
ಮೈಸೂರು: ಮೈಸೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನರು ಮನೆಗಳಿಗೆ ನೀರು ನುಗ್ಗಿ ಸಂಕಷ್ಟಕ್ಕೀಡಾಗಿದ್ದಾರೆ. ಇತ್ತ ಜನರ ಸಮಸ್ಯೆಗಳನ್ನು ಆಲಿಸಲು ಬಂದ ಜನಪ್ರತಿನಿಧಿಗಳು ಉಡಾಫೆ ಉತ್ತರ ನೀಡಿ, ಸಂತ್ರಸ್ತರನ್ನು ನಿರ್ಲಕ್ಷ್ಯ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರ ಕಾರು ನಿಲ್ಲಿಸಿ ಸಮಸ್ಯೆ ಹೇಳಿಕೊಳ್ಳಲು ಮುಂದಾಗಿದ್ದು, ಈ ವೇಳೆ ಸಚಿವರು ಜಿಲ್ಲಾಧಿಕಾರಿಗಳ ಬಳಿಗೆ ಹೋಗಮ್ಮಾ ಎಂದು ತಾತ್ಸಾರದಿಂದ ಉತ್ತರಿಸಿದ್ದಾರೆ. ಇದಾದ ಬಳಿಕ ಮಹಿಳೆ ಬಳಿಕ ಜಿ.ಟಿ. ದೇವೇಗೌಡರ ಬಳಿ ಬಂದು ಸಮಸ್ಯೆ ಹೇಳಲು ಯತ್ನಿಸಿದಾಗ ಅವರೂ ಮಹಿಳೆಯ ಸಮಸ್ಯೆ ಆಲಿಸಲು ಮುಂದಾಗಲಿಲ್ಲ.
ಮಹಿಳೆಯು ಸರ್, ನಮ್ಮ ಮನೆಗೆ ನೀರು ನುಗ್ಗಿ ಸಮಸ್ಯೆ ಆಗಿದೆ. ನೀವು ಬಂದು ನೋಡಿ, ನಾವು ಜೀವನ ಮಾಡುವುದು ಹೆಂಗೆ, ನಾವು ಇರಬೇಕಾ ಬೇಡವಾ..? ಹೀಗೆ ಆದರೆ ನಾವು ಸಾಯಬೇಕಾಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಜಿ.ಟಿ ದೇವೇಗೌಡ ಅವರು ಕೂಡ ಉಡಾಫೆ ಉತ್ತರ ನೀಡಿದ್ದು, ಹೋಗಮ್ಮ ಇದು ನಿನ್ನದೊಬ್ಬಳ ಸಮಸ್ಯೆ ಅಲ್ಲ. ಎಲ್ಲಾ ಕಡೆನೂ ಇದೇ ಸಮಸ್ಯೆ ಹೋಗು ಎಂದು ಕಳುಹಿಸಿದ್ದಾರೆ ಎನ್ನಲಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯದ ಉತ್ತರದಿಂದ ಮಹಿಳೆ ಕಣ್ಣೀರು ಹಾಕಿಕೊಂಡು ಸ್ಥಳದಿಂದ ತೆರಳಿದ್ದಾರೆ. ಕನಿಷ್ಠ ಪಕ್ಷ ಜನರ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಇಲ್ಲದವರು ಯಾಕಾದರೂ ಸ್ಥಳಕ್ಕೆ ಬರಬೇಕು? ಜನರ ನೋವಿನ ಮಾತುಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಜಿಲ್ಲೆಯ ಜವಾಬ್ದಾರಿ ಯಾಕೆ ವಹಿಸಿಕೊಳ್ಳುತ್ತೀರಿ? ಬೇರೆಯವರಿಗೆ ನಿಮ್ಮ ಸ್ಥಾನ ಬಿಟ್ಟುಕೊಡಿ ಎಂಬ ಆಕ್ರೋಶದ ಮಾತುಗಳು ಘಟನೆ ಬೆನ್ನಲ್ಲೇ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka