ಪ್ರವೀಣ್ ಹತ್ಯೆ ಪ್ರಕರಣ: ನಿನ್ನೆ ಸಂಜೆ ವೇಳೆಗೆ ಮಹತ್ತರವಾದ ಸುಳಿವು ಸಿಕ್ಕಿದೆ: ಸಚಿವ ಸುನೀಲ್ ಕುಮಾರ್
ಉಡುಪಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಕ್ತವಾದ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದೇನೆ. ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಹೋಗಿಲ್ಲ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ನಿನ್ನೆ ಸಂಜೆ ವೇಳೆಗೆ ಮಹತ್ತರವಾದ ಸುಳಿವು ಸಿಕ್ಕಿದೆ ಎಂದು ಇಲಾಖೆ ಮೂಲಕ ಗೊತ್ತಾಗಿದೆ. ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಹೋಗಿಲ್ಲ . ಎಡಿಜಿಪಿ ಅವರು ಇಲ್ಲೇ ಮೊಕ್ಕಾಂ ಹೂಡಿದ ಕಾರಣಕ್ಕೆ ಹಾಗೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾರು ಹಣಕಾಸಿನ ನೆರವು ನೀಡಿದ್ದಾರೆ ಹಾಗೂ ಯಾರು ನಿಜವಾದ ಕೊಲೆಗಡುಕರು ಎಂಬುದನ್ನು ಪೋಲಿಸ್ ಇಲಾಖೆ ಪತ್ತೆ ಹಚ್ಚುವ ವಿಶ್ವಾಸ ಇದೆ ಎಂದು ತಿಳಿಸಿದರು.
ಪ್ರತಿಕಾರಗಳ ಕೊಲೆಗಳ ಸಂಬಂಧ ಪ್ರತಿಕ್ರಿಯಿಸಿದ ಅವರು, ಹತ್ಯೆಯನ್ನು ಸಮರ್ಥಿಸಲಾಗದು. ವೈಚಾರಿಕ ವಿಚಾರಗಳ ಚರ್ಚೆ ಮೂಲಕ ನಡೆಯಬೇಕೆ ಹೊರತು ಹಿಂಸಾರೂಪದಲ್ಲಿ ಯಾವುದೂ ನಡೆಯಬಾರದು ಎಂದರು.
ಜಿಹಾದಿ ಹಿಂಸಾಚಾರ ಕೇವಲ ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ ದೇಶದ ಹಲವು ರಾಜ್ಯ ಹಾಗೂ ರಾಜ್ಯದ ಹಲವು ಜಿಲ್ಲೆಗಳಿಗೆ ವಿಸ್ತರಿಸಿರುವುದು ನಾವು ಕಂಡಿದ್ದೇವೆ. ಹಿಂದೆ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿದ್ದ ಜಿಹಾದಿ ಹಿಂಸಾಚಾರ ಪಶ್ಚಿಮ ಬಂಗಾಳ ರಾಜಸ್ಥಾನ ಕೇರಳ ಕರ್ನಾಟಕ ಹೀಗೆ ಬೇರೆ ಬೇರೆ ರಾಜ್ಯಗಳಿಗೆ ವಿಸ್ತರಿಸಿದೆ ಎಂದು ಅವರು ಹೇಳಿದರು.
ಯಾರು ಈ ರೀತಿಯ ಅಹಿತಕರ ಘಟನೆಗಳಿಗೆ ಪ್ರಯತ್ನ ಮಾಡುತ್ತಾರೆ ಅಂಥವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತದೆ. ಅದೇ ರೀತಿ ಜಿಹಾದಿ ಶಕ್ತಿಗಳ ವಿರುದ್ಧವೂ ಸಮಾಜವು ಒಂದಾಗಬೇಕಾಗಿದೆ ಎಂದು ಸುನೀಲ್ ಕರೆ ನೀಡಿದರು.
ಇನ್ನೂ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದೇ ಮನೆಯಲ್ಲಿ ಅಪಸ್ವರಗಳು ಇದ್ದೇ ಇರುತ್ತದೆ . ಇದು ಭಿನ್ನಾಭಿಪ್ರಾಯ ಅಲ್ಲ, ಕಾರ್ಯಕರ್ತರ ಭಾವನೆಯನ್ನು ನಾವು ಸ್ವೀಕರಿಸಿದ್ದೇವೆ. ಕಾರ್ಯಕರ್ತರ ಭಾವನೆಯನ್ನು ನಾನು ಮಂತ್ರಿಯಾಗಿ ಅಲ್ಲ ಒಬ್ಬ ಕಾರ್ಯಕರ್ತನಾಗಿ ಒಪ್ಪುತ್ತೇನೆ. ಮತ್ತೆ ನಾವು ಆ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತೇವೆ ಎಂದರು.
ಮಸೂದ್ ಹಾಗೂ ಫಾಜಿಲ್ ಮನೆಗಳಿಗೆ ಭೇಟಿ ನೀಡದ ಕುರಿತು ವ್ಯಾಪಕ ಆಕ್ರೋಶದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ನಾನು ಸ್ಪಷ್ಟನೆ ಕೊಡಬೇಕಾದ ಅಗತ್ಯವಿಲ್ಲ ಎಂದು ಸುನೀಲ್ ಕುಮಾರ್ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka