ಕೇರಳದಲ್ಲಿ ನಿಫಾ ವೈರಸ್ ಹಾವಳಿ: ಸೆ.24ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; 6 ಪಾಸಿಟಿವ್ ಕೇಸ್ ಪತ್ತೆ - Mahanayaka
1:20 PM Saturday 21 - September 2024

ಕೇರಳದಲ್ಲಿ ನಿಫಾ ವೈರಸ್ ಹಾವಳಿ: ಸೆ.24ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; 6 ಪಾಸಿಟಿವ್ ಕೇಸ್ ಪತ್ತೆ

16/09/2023

ನಿಫಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಕೋಯಿಕ್ಕೋಡ್ ನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಂದಿನ ಭಾನುವಾರ ಸೆಪ್ಟೆಂಬರ್ 24 ರವರೆಗೆ ಒಂದು ವಾರದವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ. ಇದರಲ್ಲಿ ಶಾಲೆಗಳು, ವೃತ್ತಿಪರ ಕಾಲೇಜುಗಳು ಮತ್ತು ಬೋಧನಾ ಕೇಂದ್ರಗಳು ಸೇರಿವೆ. ಏತನ್ಮಧ್ಯೆ, ವಾರವಿಡೀ ಆನ್ಲೈನ್ ತರಗತಿಗಳನ್ನು ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಸ್ತುತ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿ 1,080 ಜನರಿದ್ದು, ಮತ್ತೆ 130 ಜನರನ್ನು ಹೊಸದಾಗಿ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಈ ಪೈಕಿ 327 ಮಂದಿ ಆರೋಗ್ಯ ಕಾರ್ಯಕರ್ತರು, ಇತರ ಜಿಲ್ಲೆಗಳ ಒಟ್ಟು 29 ಜನರು ನಿಪಾಹ್ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಇವರಲ್ಲಿ 22 ಮಂದಿ ಮಲಪ್ಪುರಂ, ಒಬ್ಬರು ವಯನಾಡ್ ಮತ್ತು ಮೂವರು ಕಣ್ಣೂರು ಮತ್ತು ತ್ರಿಶೂರ್ ಜಿಲ್ಲೆಯವರು ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.

ಹೈರಿಸ್ಕ್ ವಿಭಾಗದಲ್ಲಿ 175 ಸಾಮಾನ್ಯ ಜನರು ಮತ್ತು 122 ಆರೋಗ್ಯ ಕಾರ್ಯಕರ್ತರು ಇದ್ದಾರೆ. ಆಗಸ್ಟ್ 30 ರಂದು ಸಾವನ್ನಪ್ಪಿದ ವ್ಯಕ್ತಿಯ ಪರೀಕ್ಷಾ ಫಲಿತಾಂಶವು ಪಾಸಿಟಿವ್ ಹೊರಬಂದಿರುವುದರಿಂದ ಸಂಪರ್ಕ ಪಟ್ಟಿಯಲ್ಲಿರುವ ಜನರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.


Provided by

ಸದ್ಯ ರಾಜ್ಯದಲ್ಲಿ 6 ನಿಫಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 30 ರಂದು ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 17 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಸಕ್ರಿಯ ಪ್ರಕರಣಗಳಲ್ಲಿ ನಾಲ್ವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ನಿಫಾ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಎಲ್ಲಾ ಆಸ್ಪತ್ರೆಗಳು ದಿನಕ್ಕೆ ಎರಡು ಬಾರಿ ಸಭೆ ಸೇರಿ ವೈದ್ಯಕೀಯ ಮಂಡಳಿಯನ್ನು ರಚಿಸಬೇಕು ಮತ್ತು ವರದಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕು. ರಾಜ್ಯದ ಸಾಂಕ್ರಾಮಿಕ ರೋಗ ನಿಯಂತ್ರಣ ಪ್ರೋಟೋಕಾಲ್ ಗಳ ಆಧಾರದ ಮೇಲೆ ಜಿಲ್ಲಾಧಿಕಾರಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ಸುದ್ದಿ