ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ | ಪುದುಚೇರಿ ಕಾಂಗ್ರೆಸ್ ಸರ್ಕಾರ ನೆಲಕಚ್ಚಿದ ಬೆನ್ನಲ್ಲೇ ಯುವ ಕಾರ್ಯಕರ್ತರಿಂದ ಬೇಸರ
ಪುದುಚೇರಿ: ಬಹುಮತ ಸಾಬೀತುಪಡಿಸಲಾಗದೇ ಪುದುಚೇರಿ ಕಾಂಗ್ರೆಸ್ ಸರ್ಕಾರವು ಪತನವಾಗಿದ್ದು, ಕರ್ನಾಟಕ ಮಾದರಿಯಲ್ಲಿ ಶಾಸಕರು ಪಕ್ಷಕ್ಕೆ ಕೈಕೊಡುವ ಮೂಲಕ ಪುದುಚೇರಿ ಸಿಎಂ ವಿ.ನಾರಾಯಣ ಸ್ವಾಮಿ ಅವರು ಬಹುಮತ ಸಾಬೀತುಪಡಿಸಲು ವಿಫಲವಾಗುವ ಸನ್ನಿವೇಶ ಸೃಷ್ಟಿಯಾಗಿತ್ತು.
ಪುದುಚೇರಿ ಕಾಂಗ್ರೆಸ್ ನ ಶಾಸಕರು ಒಬ್ಬೊಬ್ಬರಾಗಿ ಕಾಂಗ್ರೆಸ್ ನಿಂದ ಹೊರ ನಡೆದ ಬೆನ್ನಲ್ಲೇ ಪುದುಚೇರಿ ಸರ್ಕಾರ ಕಾಂಗ್ರೆಸ್ ಕೈ ತಪ್ಪಿದೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಪತನವನ್ನು ಪುದುಚೇರಿ ಸರ್ಕಾರದ ಪತನ ಮತ್ತೆ ನೆನಪಿಸಿತು.
ಬಹುಮತ ಸಾಬೀತು ಮಾಡಲು ವಿಫಲವಾದ ಸಿಎಂ ನಾರಾಯಣಸ್ವಾಮಿ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅವರ ಪಕ್ಷದಿಂದಲೇ ಗೆದ್ದವರು ಮುಳುವಾಗುತ್ತಿದ್ದಾರೆ. ಚುನಾವಣೆ ಸಂದರ್ಭ ಹಣ ಬಲ ಇದ್ದವರನ್ನು ಕಾಂಗ್ರೆಸ್ ಟಿಕೆಟ್ ನೀಡಿ ಕಣಕ್ಕಿಳಿಸುತ್ತದೆ. ಗೆದ್ದ ಅಭ್ಯರ್ಥಿ ಇನ್ನುಷ್ಟು ಹಣಗಳಿಸುವ ಉದ್ದೇಶದಿಂದ ಬೇರೆ ಪಕ್ಷಕ್ಕೆ ಹೋಗುತ್ತಾನೆ. ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಕಾರ್ಯಕರ್ತರಿಗೆ ಟಿಕೆಟ್ ನೀಡಿ, ನಿಷ್ಠಾವಂತರನ್ನು ಕಣಕ್ಕಿಳಿಸಿದರೆ, ಗೆದ್ದರೆ ಪಕ್ಷಕ್ಕೆ ನಿಯತ್ತಾಗಿರುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸದ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಅವಿರತ ಶ್ರಮದಿಂದ ಗೆದ್ದು ಯಾವುದೋ ಪಕ್ಷ ಸರ್ಕಾರ ರಚನೆ ಮಾಡಲು ಸಹಕಾರ ನೀಡುವ ಕಾಂಗ್ರೆಸ್ ಶಾಸಕರ ನಡೆ, ಪಕ್ಷದ ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಿದೆ. ಕಾಂಗ್ರೆಸ್ ನಿಂದ ಹಣವಂತರಿಗೆ ಟಿಕೆಟ್ ನೀಡುವ ಬದಲು ನಿಷ್ಠಾವಂತರಿಗೆ ಟಿಕೆಟ್ ನೀಡಿ, ಸಾಮಾನ್ಯ ಕಾರ್ಯಕರ್ತರನ್ನು ನಾಯಕರಾಗಿ ಬೆಳೆಸಿ. ಅವರು ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಹಣವಂತರಿಗೆ ಟಿಕೆಟ್ ನೀಡಿದರೆ, ಅವರು ತಮ್ಮ ಆದಾಯದ ಮೂಲಗಳಿಗೆ ನಿಯತ್ತಾಗಿರುತ್ತಾರೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.