ನಿವೇಶನರಹಿತರಿಗೆ ನಿವೇಶನ ನೀಡಲು ಜಿಲ್ಲಾಡಳಿತದಿಂದ ಕ್ರಮ: ಜಿಲ್ಲಾಧಿಕಾರಿ ಆರ್. ಲತಾ - Mahanayaka
8:27 AM Saturday 21 - September 2024

ನಿವೇಶನರಹಿತರಿಗೆ ನಿವೇಶನ ನೀಡಲು ಜಿಲ್ಲಾಡಳಿತದಿಂದ ಕ್ರಮ: ಜಿಲ್ಲಾಧಿಕಾರಿ ಆರ್. ಲತಾ

dc latha
20/06/2021

ಚಿಕ್ಕಬಳ್ಳಾಪುರ: ಆಶ್ರಯ ವಸತಿ ಯೊಜನೆಯಡಿ ನಿವೇಶನರಹಿತರಿಗೆ ನಿವೇಶನ ನೀಡುವ ಯೊಜನೆ ಈಗಾಗಲೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದು,ಈ ಉದ್ದೇಶಕ್ಕಾಗಿ 600 ಎಕರೆಗಿಂತ ಹೆಚ್ಚು ಜಮೀನನ್ನು ಮಂಜೂರು ಮಾಡಿದ್ದು ಈ ಎಲ್ಲಾ ಜಮೀನನ್ನು ಬಡಾವಣೆಗಳನ್ನಾಗಿ ಅಭಿವೃದ್ಧಿಪಡಿಸಿ ಜಿಲ್ಲಾಡಳಿತ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಸಹಯೊಗದಲ್ಲಿ ನಿವೇಶನರಹಿತರಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮವು ಜುಲೈ ಮತ್ತು ಆಗಸ್ಟ್ ಮಾಹೆಗಳಲ್ಲಿ ಶರ ವೇಗ ಪಡೆದುಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡುವ ಆಶ್ರಯ ಯೊಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಆಶ್ರಯ ಯೊಜನೆಯಡಿ ಜಿಲ್ಲೆಯ ನಿವೇಶನರಹಿತರೆಲ್ಲರಿಗೆ ನಿವೇಶನ ಹಂಚಿಕೆ ಮಾಡುವ ಕಾರ್ಯವನ್ನು ಅಭಿಯಾನದ ರೀತಿಯಲ್ಲಿ ಕೈಗೊಳ್ಳಲು ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದರು.ಅವರ ನಿರ್ದೇಶನ ಹಾಗೂ ಆಶಯದಂತೆ ಜಿಲ್ಲೆಯಲ್ಲಿನ ನಿವೇಶನ ರಹಿತರ ಮಾಹಿತಿ ಸಂಗ್ರಹಿಸಲಾಗಿದೆ ಹಾಗೂ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗಳ ಪರಿಶ್ರಮದಿಂದ ವಸತಿಯೊಗ್ಯ ಜಮೀನನ್ನು ಜಿಲ್ಲೆಯಾದ್ಯಂತ ಗುರುತಿಸಿ ಮುಂದಿನ ದಿನಗಳಲ್ಲಿನ ಬೇಡಿಕೆಯನ್ನು ಸಹ ಗಮನದಲ್ಲಿಟ್ಟುಕೊಂಡು ಅಗತ್ಯತೆಗನುಗುಣವಾಗಿ 600 ಎಕರೆಗೂ ಹೆಚ್ಚು ಜಮೀನನ್ನು ಈಗಾಗಲೇ ಮಂಜೂರುಮಾಡಲಾಗಿದೆ. ಕಳೆದ 4 ತಿಂಗಳ ಹಿಂದೆಯೆ ಈ ಎಲ್ಲಾ ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು ಕೋವಿಡ್ 2ನೇ ಅಲೆಯ ತೀವ್ರತೆಯಿಂದ ಈ ಕಾರ್ಯಕ್ರಮವು ನೆನೆಗುದಿಗೆ ಬಿದ್ದಿತ್ತು ಇತ್ತೀಚಿಗೆ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೂನ್ಯದತ್ತ ಮುಖಮಾಡಿದೆ ಜಿಲ್ಲೆಯ ಮಟ್ಟಿಗೆ ಇದು ಆಶಾದಾಯಕವಾದ ಬೆಳವಣಿಗೆಯಾಗಿದ್ದು,ಕೋವಿಡ್ ಪ್ರಸರಣ ಪ್ರಮಾಣ ಇಳಿಕೆ ಕಂಡಿರುವುದರಿಂದ ನಿವೇಶನ ವಿತರಣಾ ಕಾರ್ಯ ಸನಿಹದಲ್ಲೇ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟು 38000 ನಿವೇಶನ ವಿತರಿಸುವ ಗುರಿ


Provided by

ಪ್ರಾಣಿ ಪಕ್ಷಿಗಳು ಸಹ ಒಂದು ಗೂಡನ್ನ ಮಾಡಿಕೊಂಡಿರುತ್ತವೆ ಅಂತದ್ದರಲ್ಲಿ ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದು ಸೂರನ್ನು ಹೊಂದುವ ಆಸೆ ಇರುತ್ತೆ ಆಶ್ರಯ ಯೊಜನೆಯಡಿ ಒಂದು ನಿವೇಶನ ನೀಡಿದರೆ ಎಲ್ಲರೂ ಒಂದು ಸೂರು ಹೊಂದಲು ಸಹಾಯ ಆಗಲಿದೆ. ಆದ್ದರಿಂದ ನಿವೇಶನರಹಿತರೆಲ್ಲರಿಗೂ 30*20 ಅಳತೆಯ ನಿವೇಶನಗಳನ್ನು ನೀಡುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ.ಈ ಹಿನ್ನಲೆಯಲ್ಲಿ ಆಶ್ರಯ ಯೊಜನೆಯಡಿ ಗ್ರಾಮೀಣ ಭಾಗದಲ್ಲಿ ಸು.32000 ಮತ್ತು ನಗರ ವ್ಯಾಪ್ತಿಯಲ್ಲಿ ಸು.6000 ಒಟ್ಟು 38000 ನಿವೇಶನಗಳನ್ನು ಜಿಲ್ಲೆಯ ನಿವೇಶನರಹಿತರಿಗೆ ನೀಡಲು ಗುರಿ ನಿಗಧಿಪಡಿಸಿಕೊಂಡು ಯೊಜನೆಯ ರೂಪುರೇಷೆಯನ್ನು ಜಿಲ್ಲಾಡಳಿತ ಈಗಾಗಲೇ ಸಿದ್ದಪಡಿಸಿದ್ದು, ಸದ್ಯದಲ್ಲೆ ನಿವೇಶನ ಹಂಚಿಕೆ ಮಾಡುವ ಕಾರ್ಯ 3 ತಿಂಗಳಲ್ಲಿ ಅಭಿಯಾನದ ರೀತಿಯಲ್ಲಿ ಜರುಗಲಿದೆ ಎಂದರು.

ಪೋಲಾಗ ಕೂಡದು

ಜಿಲ್ಲೆಯಲ್ಲಿ ಯಾರೂ ಸಹ ನಿವೇಶನರಹಿತರಾಗಿ ಹಾಗೂ ವಸತಿರಹಿತರಾಗಿ ಇರಬಾರದು ಎಂಬ ಸದುದ್ದೇಶದಿಂದ ಆಶ್ರಯ ಯೋಜನೆಯನ್ನು ಜಾರಿಗೊಳಿಸಿದೆ ಅದರಂತೆ ಯೋಜನೆಯ ಸದುದ್ದೇಶಕ್ಕೆ ಜಿಲ್ಲಾಡಳಿತದಿಂದ ನಿವೇಶನರಹಿತರಿಗೆ ನಿವೇಶನ ನೀಡಲು ಮಂಜೂರು ಮಾಡಿ ಗುರುತಿಸಿರುವ ಜಮೀನಿನಲ್ಲಿ ಒಂದಿಂಚು ಕೂಡ ಯಾರು ಒತ್ತುವರಿ ಮಾಡದಂತೆ ಹಾಗೂ ನೀಲ ನಕ್ಷೆ ಸಿದ್ಧಪಡಿಸುವಾಗ ಜಾಗ ಪೋಲಾಗದಂತೆ ನೋಡಿಕೊಳ್ಳಬೇಕೆಂದು ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮವಹಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ 32000 ನಿವೇಶನ ವಿತರಣೆಗೆ ಗುರಿ

ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ನಿವೇಶನರಹಿತರಿಗೆ ನಿವೇಶನ ನೀಡಲು ಫಲನುಭವಿಗಳ ಆಯ್ಕೆ ಕಾರ್ಯ ಪ್ರಗತಿಯಲ್ಲಿದೆ. ಆಯ್ಕೆಯಾದವರೆಲ್ಲರಿಗೂ 30*20 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶಕ್ಕೆ 617.05 ಎಕರೆ ಜಮೀನನ್ನು ಗುರತಿಸಲಾಗಿದ್ದು ಈ ಪೈಕಿ 479.63 ಎಕರೆ ಜಮೀನನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಇನ್ನುಳಿದ 149.41 ಎಕರೆ ಜಮೀನು ಮಂಜುರಾತಿ ಪ್ರಕ್ರಿಯೆಯ ಹಂತದಲ್ಲಿದೆ.ಪ್ರಸ್ತುತ ಮಂಜೂರು ಮಾಡಿರುವ 479.63 ಪೈಕಿ 203 ಎಕರೆ ಜಮೀನಿಗೆ ಬಡಾವಣೆ ನಕ್ಷೆ(ಲೇಔಟ್ ಪ್ಲಾನ್) ಮಾಡಲಾಗಿದೆ. 93.29 ಎಕರೆ ಜಮೀನನ್ನು ಈಗಾಗಲೇ ಅಭಿವೃದ್ಧಿಗೊಳಿಸಲಾಗಿದೆ, 31.21 ಎಕರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.44.05 ಎಕರೆಗೆ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗಿದೆ, ಉಳಿದ ಮಂಜೂರು ಮಾಡಿರುವ ಜಮೀನಿಗೆ ಬಡಾವಣೆ ನಕ್ಷೆ(ಲೇಔಟ್ ಪ್ಲಾನ್) ಸಿದ್ದಪಡಿಸಿ ಹಕ್ಕುಪತ್ರ ಪಡೆಯಲು ನಿಗಮಕ್ಕೆ ಸಲ್ಲಿಸಲು ತ್ವರಿತವಾಗಿ ಕ್ರಮವಹಿಸುವಂತೆ ಪಿ.ಆರ್.ಇ.ಡಿ ಅಭಿಯಂತರರಿಗೆ ಸೂಚಿಸಿದರು.

ನಗರ ಭಾಗದಲ್ಲಿ 6000 ನಿವೇಶನ ವಿತರಣೆಯ ಗುರಿ

ಜಿಲ್ಲೆಯ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನ ನಿಡುವ ಉದ್ದೇಶಕ್ಕಾಗಿ 205.05 ಎಕರೆ ಜಮೀನನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಈ ಪೈಕಿ 140.32 ಎಕರೆಗೆ ಬಡಾವಣೆ ನಕ್ಷೆ(ಲೇಔಟ್ ಪ್ಲಾನ್) ಸಿದ್ದಪಡಿಸಲಾಗಿದೆ.ಇನ್ನುಳಿದ ಜಮೀನಿಗೆ ಬಡಾವಣೆ ನಕ್ಷೆ(ಲೇಔಟ್ ಪ್ಲಾನ್) ಸಿದ್ಧಪಡಿಸಿ ಹಕ್ಕುಪತ್ರಪಡೆಯಲು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಬೆಂಗಳೂರು ರವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿಗೆ ಸೂಚಿಸಿದರು.

ದಾಖಲೆಯಾಗಲಿದೆ

ಗ್ರಾಮೀಣ ಮತ್ತು ನಗರ ಪ್ರದೇಶಗಳು ಸೇರಿದಂತೆ 38000 ನಿವೇಶನಗಳನ್ನು ಯೊಜಿಸಿದಂತೆ ಹಂಚಿಕೆ ಮಾಡಿದಲ್ಲಿ ಜಿಲ್ಲೆಯ ಮಟ್ಟಿಗೆ ಇದೊಂದು ದಾಖಲೆಯ ಮೈಲಿಗಲ್ಲಾಗಲಿದೆ. ಯೋಜಿಸಿದಂತೆ ಆದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಗಳಿಸಲಿದೆ, ಜಿಲ್ಲೆಯ ಮಟ್ಟಿಗೆ ಹಿಂದೆಂದು ಇಷ್ಟೊಂದು ಪ್ರಮಾಣದಲ್ಲಿ ನಿವೇಶನಗಳ ಹಂಚಿಕೆ ಕಾರ್ಯ ನಡೆದಿಲ್ಲ, ಜಿಲ್ಲೆಯ ಶಾಸಕರು,ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ನಿವೇಶನಗಳನ್ನು ಫಲನುಭವಿಗಳಿಗೆ ವಿತರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ. ಅಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸಿ 38000 ನಿವೇಶನಗಳನ್ನು ಒಂದೆರಡು ತಿಂಗಳಲ್ಲಿ ಹಂಚಿಕೆ ಮಾಡಿ ಈ ಮಹತ್ವಾಕಾಂಕ್ಷಿ ಆಶ್ರಯ ಯೋಜನೆಯನ್ನು ಸಾಕಾರಗೊಳಿಸಲು ತಾವೆಲ್ಲರೂ ಕಾರಣೀಭೂತರಾಗಬೇಕು,ಜಿಲ್ಲೆಯ ಕೀರ್ತಿ ಪತಾಕೆಯನ್ನು ರಾಜ್ಯಮಟ್ಟಕ್ಕೆ ಎತ್ತರಿಸುವ ನಿಟ್ಟಿನಲ್ಲಿ ತಾವೆಲ್ಲರೂ ಕೆಲಸ ಮಾಡಬೇಕೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎ.ಎನ್ ರಘುನಂದನ್,ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿ ರೇಣುಕಾ ಎಂ , ಪಂಚಾಯತ್ ರಾಜ್ ಇಲಾಖೆಯ ಯೋಜನಾಧಿಕಾರಿ ಗಿರಿಜಾ ಶಂಕರ್,ಎಲ್ಲಾ ತಾಲೂಕುಗಳ ತಹಸೀಲ್ದಾರ್ ಗಳು, ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಗಳು, ಪೌರಾಯುಕ್ತರು, ಪಂಚಾಯತ್ ರಾಜ್ ಇಲಾಖೆಯ ಅಭಿಯಂತರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ