ನೆಹರೂ ಈಗ ಆಡಳಿತ ನಡೆಸುತ್ತಿಲ್ಲ| ಬಿಜೆಪಿಯ ವೈಫಲ್ಯಕ್ಕೆ ಪ್ರಿಯಂಕಾ ತಿರುಗೇಟು
21/04/2021
ನವದೆಹಲಿ: ಕೋವಿಡ್-19ನ ಎರಡನೇ ಅಲೆ ಎದುರಿಸುವ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬುಧವಾರ ಆರೋಪಿಸಿದ್ದಾರೆ.
‘ಜವಾಹರಲಾಲ್ ನೆಹರೂ ಈಗ ಆಡಳಿತ ನಡೆಸುತ್ತಿಲ್ಲ. ಹೀಗಾಗಿ ತಮ್ಮ ವೈಫಲ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಈಗ ನೆಹರೂ ಅವರನ್ನು ದೂಷಿಸುವಂತಿಲ್ಲ ಎಂದೂ ಕುಟುಕಿದ್ದಾರೆ.
‘ಲಸಿಕೆ ನೀಡುವ ಕಾರ್ಯಕ್ರಮವನ್ನು ಸರಿಯಾಗಿ ನಿಭಾಯಿಸಿಲ್ಲ. ಹಿಂದಿನ ವರ್ಷಗಳಲ್ಲಿ ಆಮ್ಲಜನಕದ ರಫ್ತಿಗೆ ಸರ್ಕಾರ ಒತ್ತು ನೀಡಿತು. ಈಗ ತನ್ನ ದೇಶದ ಜನರೇ ತತ್ತರಿಸುತ್ತಿದ್ದರೂ ಅವರಿಗೆ ಆಮ್ಲಜನಕ ಪೂರೈಸುವಲ್ಲಿ ವಿಫಲವಾಗಿದೆ’ ಎಂದು ಟೀಕಿಸಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ‘ವಿರೋಧ ಪಕ್ಷಗಳು ನೀಡುವ ರಚನಾತ್ಮಕ ಸಲಹೆಗಳನ್ನು ಈ ಸರ್ಕಾರ ತಿರಸ್ಕರಿಸುತ್ತದೆ. ಅದಕ್ಕೆ ರಾಜಕೀಯ ಬಣ್ಣ ನೀಡುತ್ತದೆ’ ಎಂದರು.
‘ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಬರೆದ ಪತ್ರಕ್ಕೆ ತಮ್ಮ ಸಂಪುಟದ ಸಚಿವರೊಬ್ಬರಿಂದ ಉತ್ತರ ಕೊಡಿಸಲಾಗುತ್ತದೆ’ ಎಂದೂ ಟೀಕಿಸಿದರು.