ದ್ರೋಣಾಚಾರ್ಯನಂತಹ ಗುರು, ಏಕಲವ್ಯನಂತಹ ಶಿಷ್ಯ ಯಾರಿಗೂ ಸಿಗಬಾರದು! - Mahanayaka

ದ್ರೋಣಾಚಾರ್ಯನಂತಹ ಗುರು, ಏಕಲವ್ಯನಂತಹ ಶಿಷ್ಯ ಯಾರಿಗೂ ಸಿಗಬಾರದು!

dronacharya eklavya
06/09/2024

ನಾವು ಏಕಲವ್ಯ ಮತ್ತು ದ್ರೋಣಾಚಾರ್ಯನ ಕಥೆಗಳನ್ನು ಕೇಳಿದ್ದೇವೆ. ಏಕಲವ್ಯ ದ್ರೋಣಾಚಾರ್ಯರ ಬಳಿ ಬಂದು ತನಗೆ ಬಿಲ್ಲು ವಿದ್ಯೆ ಕಲಿಸಿಕೊಡಿ ಅಂತ ಬೇಡ್ತಾನೆ. ಆದ್ರೆ  ರಾಜವಂಶಸ್ಥರನ್ನು ಬಿಟ್ಟರೆ ಬೇರೆ ಯಾರಿಗೂ ತಾನು ವಿದ್ಯೆ ಕಳಿಸುವುದಿಲ್ಲ ಅಂತ ದ್ರೋಣಾಚಾರ್ಯ ವಿದ್ಯೆ ಕಲಿಸಲು ನಿರಾಕರಿಸುತ್ತಾರೆ.

ಅತ್ತ ದ್ರೋಣಾಚಾರ್ಯ ಅರ್ಜುನನ್ನು ವಿಶ್ವದ ಅತ್ಯುತ್ತಮ ಬಿಲ್ಲುಗಾರನನ್ನಾಗಿ ಮಾಡುತ್ತೇನೆ ಎಂದು ಮಾತುಕೊಟ್ಟಿದ್ದ. ಹೀಗಿರುವಾಗ ಒಂದು ದಿನ ದ್ರೋಣಾಚಾರ್ಯರು ತಮ್ಮ ಶಿಷ್ಯರ ಕಾಡಿಗೆ ಹೋಗುತ್ತಾರೆ. ಆಗ ಅಲ್ಲಿ ಅರ್ಜುನನ ಬೇಟೆ ನಾಯಿ ತುಂಬಾ ಬೊಗಳುತ್ತಿರುತ್ತದೆ. ಈ ವೇಳೆ ಎಲ್ಲಿಂದಲೋ ಬಂದ ಬಾಣವೊಂದು ಬೇಟೆನಾಯಿಯ ಬಾಯಿಗೆ ನಾಟುತ್ತದೆ. ಮಾತ್ರವಲ್ಲ ನಾಯಿಗೆ ಯಾವುದೇ ಹಾನಿಯೂ ಆಗುವುದಿಲ್ಲ. ಈ ಬಾಣವನ್ನು ಯಾರು  ಪ್ರಯೋಗಿಸಿದವರು ಅಂತ ಹುಡುಕಿಕೊಂಡು ಹೋದ ವೇಳೆ. ಏಕಲವ್ಯ ಕಾಡಿನಲ್ಲಿ ದ್ರೋಣಾಚಾರ್ಯರ ಕಲ್ಲಿನ ಮೂರ್ತಿಯ ಮುಂದೆ ಬಿಲ್ಲು ವಿದ್ಯೆ ಅಭ್ಯಾಸ ಮಾಡುತ್ತಿರುವುದು ಕಂಡು ಬಂತು.

ಇದನ್ನು ಕಂಡು ಅರ್ಜುನನಿಗೆ ಹೊಟ್ಟೆ ಕಿಚ್ಚಾಯಿತು. ನನ್ನನ್ನು ವಿಶ್ವದ ಅತ್ಯುತ್ತಮ ಬಿಲ್ಲುಗಾರ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೀರಿ… ಅಂತ ದ್ರೋಣಾಚಾರ್ಯರ ವಿರುದ್ಧ ಅಸಮಾಧಾನ ತೋರುತ್ತಾನೆ. ಆಗ ದ್ರೋಣಾಚಾರ್ಯ ಏಕಲವ್ಯನ ಬಳಿ, ನನ್ನ ಪ್ರತಿಮೆಯಿಟ್ಟು ವಿದ್ಯೆ ಕಲಿತಿದ್ದಿ. ನನಗೆ ಗುರು ದಕ್ಷಿಣೆ ಕೊಡು ಎಂದು ಕೇಳುತ್ತಾನೆ. ಏನೇ ಕೇಳಿದರೂ ನಿಮಗೆ ಗುರುದಕ್ಷಿಣೆ ಕೊಡುತ್ತೇನೆ ಎಂದು ಏಕಲವ್ಯ ಕೂಡ ಒಪ್ಪಿಕೊಂಡ. ಈ ವೇಳೆ ನಿನ್ನ ಹೆಬ್ಬೆರಳನ್ನು ನನಗೆ ಗುರುದಕ್ಷಿಣೆಯಾಗಿ ಕೊಡು ಅಂತ ದ್ರೋಣಾಚಾರ್ಯ ಏಕಲವ್ಯನಿಗೆ ಕೇಳುತ್ತಾರೆ. ಹೆಬ್ಬೆರಳು ಕತ್ತರಿಸಿದರೆ, ಏಕಲವ್ಯ ಬಿಲ್ಲು ಬಾಣ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಾಗಿ ಏಕಲವ್ಯ ಕಲಿತ ವಿದ್ಯೆ ಆತನಿಗೆ ಧಕ್ಕೆ ಕೂಡದು ಅಂತ ದ್ರೋಣಾಚಾರ್ಯ ಈ ಸಂಚು ಮಾಡುತ್ತಾನೆ.

ದ್ರೋಣಾಚಾರ್ಯನಂತಹ ಗುರು ಯಾರಿಗೂ ಸಿಗಬಾರದು:

ಹೌದು..! ಒಬ್ಬ ಗುರುವಾದವನು ನಾನು ಇಂತಹ ವಂಶದವರಿಗೆ ಮಾತ್ರವೇ ವಿದ್ಯೆ ಕಲಿಸುತ್ತೇನೆ ಎಂದು ಸೀಮಿತವಾಗಬಾರದು. ಅಂತಹ ಗುರು ಎಂದಿಗೂ ಗುರು ಎನ್ನುವ ಸ್ಥಾನಕ್ಕೆ ಅರ್ಹನಾಗಲು ಹೇಗೆ ಸಾಧ್ಯ? ಗುರು ಎನ್ನುವುದರ ವ್ಯಾಪ್ತಿ ಬಹಳ ವಿಸ್ತಾರವಾದದ್ದು, ನಾನು ರಾಜವಂಶಸ್ಥರಿಗೆ ಮಾತ್ರವೇ ವಿದ್ಯೆ ಕಲಿಸೋದು ಎಂದು ಸೀಮಿತವಾಗಿದ್ದ ದ್ರೋಣಾಚಾರ್ಯ ತನ್ನ ವೃದ್ಧಾಪ್ಯದಲ್ಲಿ ತನ್ನ ಶಿಷ್ಯರ ಕೈಯಿಂದಲೇ ಮರಣ ಹೊಂದಬೇಕಾಯಿತು.

ನಿನಗೆ ವಿದ್ಯೆ ಕಲಿಸುವುದಿಲ್ಲ ಎಂದು ಏಕಲವ್ಯನನ್ನು ತಿರಸ್ಕಾರ ಮನೋಭಾವದಿಂದ ಕಲಿಸಿದ ದ್ರೋಣಾಚಾರ್ಯ, ಏಕಲವ್ಯ ತನ್ನ ಸ್ವಂತ ಶಕ್ತಿಯಿಂದ ವಿದ್ಯೆ ಕಲಿತಾಗ ಯಾವುದೇ ನಾಚಿಕೆ, ಅಂಜಿಕೆ ಇಲ್ಲದೇ ಗುರು ದಕ್ಷಿಣೆಯನ್ನು ಕೇಳಿದ. ಮಾತ್ರವಲ್ಲ ಆತ ಕಲಿತ ವಿದ್ಯೆ ಆತನಿಗೆ ಧಕ್ಕ ಕೂಡದು ಎಂದು ಭಾವಿಸುವ ಗುರು ಶ್ರೇಷ್ಠನಾಗಲು ಹೇಗೆ ಸಾಧ್ಯ?

ಏಕಲವ್ಯನಂತಹ ಶಿಷ್ಯರೂ ಸಿಗಬಾರದು!

ಏಕಲವ್ಯನಿಗೆ ಪ್ರಕೃತಿ ದತ್ತವಾಗಿ ವಿದ್ಯೆ ಕಲಿಯುವ ಸ್ವಂತಿಕೆಯಿತ್ತು. ಆದರೆ ಅದನ್ನು ಆತ ಗುರುತಿಸಿಕೊಳ್ಳಲಿಲ್ಲ. ಆತ ತನ್ನ ಗುರು ಎಂದು ಒಂದು ಕಲ್ಲನ್ನು ನಿಲ್ಲಿಸಿ ಅದೇ ದ್ರೋಣಾಚಾರ್ಯ ಎಂದು ಭಾವಿಸಿ ವಿದ್ಯೆ ಕಲಿತ. ಆತ ಅದು ದ್ರೋಣಾಚಾರ್ಯ  ಅಲ್ಲ, ಆ ಕಲ್ಲೇ ನನ್ನ ಗುರು ಎಂದು ಭಾವಿಸಿದ್ದರೂ ಆತ ವಿದ್ಯೆ ಕಲಿಯುತ್ತಿದ್ದ. ಯಾಕೆಂದರೆ ಆತನೊಳಗೆ ವಿದ್ಯೆ ಕಲಿಯುವ ಹಂಬಲವಿತ್ತು.

ತನ್ನ ಸ್ವಂತ ಶಕ್ತಿಯನ್ನು ಅರಿಯದ ವಿದ್ಯಾರ್ಥಿ ಏಕಲವ್ಯನಾದ. ದ್ರೋಣಾಚಾರ್ಯ ಗುರು ದಕ್ಷಿಣೆ ಕೇಳಿದಾಗ, ನಾನು ಕಲ್ಲನ್ನು ಗುರು ಎಂದು ಭಾವಿಸಿ ವಿದ್ಯೆ ಕಲಿತೆ, ಹಾಗಾಗಿ ಒಂದು ಪುಟ್ಟ ಕಲ್ಲಿನ ತುಂಡನ್ನು ದ್ರೋಣಾಚಾರ್ಯನಿಗೆ ನೀಡಿ, ಇದೇ ನನ್ನ ಹೆಬ್ಬೆರಳು ಎಂದು ಭಾವಿಸಿ ಗುರು ದಕ್ಷಿಣೆ ಪಡೆದುಕೋ ಎಂದು ಹೇಳುವ ಬುದ್ಧಿವಂತಿಕೆ ಏಕಲವ್ಯನಲ್ಲಿರಲಿಲ್ಲ.   ದ್ರೋಣಾಚಾರ್ಯ ನನಗೆ ದ್ರೋಹ ಬಗೆಯುತ್ತಿದ್ದಾನೆ ಎಂದು ತಿಳಿದು ಕೂಡ ಆತನ ಸಂಚಿಗೆ ಬಲಿಯಾದ ಏಕಲವ್ಯ ವಿದ್ಯಾರ್ಥಿಗಳಿಗೆ ಮಾದರಿಯಾಗಲು ಸಾಧ್ಯವೇ? ತನ್ನ ಗುರು ಹೇಳಿರುವ ಮಾತು ತಪ್ಪು ಎಂದು ತಿಳಿದರೂ ಅದನ್ನು ಪ್ರಶ್ನಿಸುವ ಮನೋಭಾವ ಪ್ರತಿಯೊಬ್ಬ ಶಿಷ್ಯನಲ್ಲೂ ಇರಬೇಕು.

ದ್ರೋಣಾಚಾರ್ಯ ಹಾಗೂ ಏಕಲವ್ಯ ಪುರಾಣಗಳ ಪಾತ್ರಧಾರಿಗಳಾಗಿದ್ದಾರೆ. ಆದರೆ ಇಂದಿಗೂ ಏಕಲವ್ಯನಂತಹ ಶಿಷ್ಯರು. ದ್ರೋಣಾಚಾರ್ಯನಂತಹ ಗುರುಗಳು ನಮ್ಮ ಸಮಾಜದಲ್ಲಿ ಕಾಣಸಿಗುತ್ತಾರೆ. ತನ್ನ ಶಿಷ್ಯರ ನಡುವೆ ತಾರತಮ್ಯ ಮಾಡುವ ಯಾವುದೇ ಗುರು ಶ್ರೇಷ್ಠನಾಗಲು ಸಾಧ್ಯವಿಲ್ಲ. ಹಾಗೆಯೇ ತನ್ನ ಗುರುಗಳು ಹೇಳಿದರು ಎಂಬ ಕಾರಣಕ್ಕೆ ಹಿಂದೆ ಮುಂದೆ ಯೋಚಿಸದೇ ನಿರ್ಧಾರ ತೆಗೆದುಕೊಳ್ಳುವ ಶಿಷ್ಯ ಕೂಡ ಒಬ್ಬ ಉತ್ತಮ ವಿದ್ಯಾರ್ಥಿ ಆಗಲಾರ.  ಗುರುವಿನ ಗುಲಾಮನಾಗದೇ, ಗುರುವನ್ನೂ ಮೀರಿಸಿ ಶಿಷ್ಯ ಹೊರಹೊಮ್ಮಿದರೆ, ಅಂತಹ ಗುರುವೇ ಶ್ರೇಷ್ಠ ಗುರುವಾಗಲು ಸಾಧ್ಯ ಎನ್ನುವುದೇ ಈ ಲೇಖನದ ಆಶಯ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ