ಉಡುಪಿ ಹತ್ಯಾಕಾಂಡ ; ಊಹಾಪೋಹದ, ಚಾರಿತ್ರ್ಯ ಹನನದ ವರದಿಗಾರಿಕೆ ಬೇಡ : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ - Mahanayaka

ಉಡುಪಿ ಹತ್ಯಾಕಾಂಡ ; ಊಹಾಪೋಹದ, ಚಾರಿತ್ರ್ಯ ಹನನದ ವರದಿಗಾರಿಕೆ ಬೇಡ : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

nejaru
15/11/2023

  • ಪ್ರಕರಣದ ವಿಚಾರಣೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸಲು ಆಗ್ರಹ

ಉಡುಪಿಯ ನೇಜಾರಿನಲ್ಲಿ ರವಿವಾರ ನಡೆದ ಭಯಾನಕ ಹತ್ಯಾಕಾಂಡದ ಆರೋಪಿಯನ್ನು ಉಡುಪಿ ಪೊಲೀಸರು ಎರಡು ದಿನಗಳೊಳಗೆ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಉಡುಪಿ ಪೋಲೀಸರ ಈ ದಕ್ಷತೆ ಹಾಗು ಚುರುಕಿನ ಕಾರ್ಯಾಚರಣೆ ಅಭಿನಂದನಾರ್ಹವಾಗಿದೆ. ಭೀಕರ ಕಗ್ಗೊಲೆಗಳನ್ನು ನಡೆಸಿದ ಹಂತಕನನ್ನು ತಡ ಮಾಡದೇ ಬಂಧಿಸಿರುವುದರಿಂದ ನೇಜಾರು ಪರಿಸರ ಮಾತ್ರವಲ್ಲ ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ಎಲ್ಲ ಪೊಲೀಸ್ ಸಿಬ್ಬಂದಿಗೆ ಇದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಹೊಣೆಗಾರರ ತುರ್ತು ಸಭೆ ಬಳಿಕ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಕೆಲವು ಚಾನಲ್ ಗಳು, ವೆಬ್ ಸೈಟ್ ಗಳು ಸಹಿತ ಮಾಧ್ಯಮದ ಕೆಲವು ವಿಭಾಗಗಳಲ್ಲಿ ಕಗ್ಗೊಲೆಯಾಗಿರುವ ಕುಟುಂಬದ ಸದಸ್ಯರ ಬಗ್ಗೆ ಕೀಳು ಅಭಿರುಚಿಯ, ಆಧಾರ ರಹಿತ ಊಹಾಪೋಹಗಳನ್ನೇ ಅಧಿಕೃತ ಸುದ್ದಿಯಂತೆ ಪ್ರಕಟಿಸುತ್ತಿರುವುದು ಅತ್ಯಂತ ಖಂಡನಾರ್ಹವಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿದೆ. ಈಗಷ್ಟೇ ಹಂತಕನ ಬಂಧನವಾಗಿದೆ. ಆತನ ಪೂರ್ಣ ವಿಚಾರಣೆಗಾಗಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹತ್ಯಾಕಾಂಡದ ಹಿಂದಿನ ನಿಜವಾದ ಕಾರಣಗಳು ಪೋಲೀಸರ ಸಮಗ್ರ ತನಿಖೆ ಹಾಗು ವಿಚಾರಣೆ ಬಳಿಕವೇ ಗೊತ್ತಾಗಬೇಕಿದೆ. ಹೀಗಿರುವಾಗ ಕೆಲವು ಮಾಧ್ಯಮಗಳು ತೀರಾ ಬೇಜವಾಬ್ದಾರಿಯುತವಾಗಿ ವದಂತಿಗಳು, ಊಹಾಪೋಹಗಳನ್ನು ಆಧರಿಸಿ ತೀರಾ ಕೀಳು ಮಟ್ಟದ ಹಾಗು ಕೊಲೆಯಾದವರ ಚಾರಿತ್ರ್ಯ ಹನನವಾಗುವಂತಹ ವರದಿಗಳನ್ನು ಪ್ರಕಟಿಸುವುದು ಅತ್ಯಂತ ಖಂಡನೀಯ. ಕಾರಣ ಏನಿದ್ದರೂ ಇಂತಹದೊಂದು ಹತ್ಯಾಕಾಂಡಕ್ಕೆ ಸಮರ್ಥನೆ ಇಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿದೆ. ಆ ಬಗ್ಗೆ ಯಾರಿಗೂ ಯಾವುದೇ ಸಂಶಯವಿಲ್ಲ. ಹಾಗಾಗಿ ಈಗ ಪೋಲೀಸರ ವಿಚಾರಣೆ ಮುಗಿಯುವವರೆಗೆ ಎಲ್ಲರೂ ತಾಳ್ಮೆಯಿಂದ ಸಹಕರಿಸಬೇಕಾಗಿದೆ. ಈ ಸಂದರ್ಭದಲ್ಲಿ ವದಂತಿಗಳನ್ನು ಹರಡಬಾರದು. ಮಾಧ್ಯಮಗಳು ಇನ್ನಷ್ಟು ಸಂಯಮದಿಂದ ವರದಿಗಾರಿಕೆ ಮಾಡಬೇಕು. ಇಂತಹ ಆಘಾತಕಾರಿ ಘಟನೆಯನ್ನು ತಮ್ಮ ಟಿ ಆರ್ ಪಿ ಹೆಚ್ಚಿಸುವ ದಾಳವಾಗಿ ಯಾವುದೇ ಮಾಧ್ಯಮ ಬಳಸಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿದೆ.

ಉಡುಪಿಯ ಇತಿಹಾಸದಲ್ಲೇ ನಡೆದಿರುವ ಈ ಅತ್ಯಂತ ಬರ್ಬರ ಹತ್ಯಾಕಾಂಡದ ಸಮಗ್ರ ತನಿಖೆ ನಡೆಯಬೇಕು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಆದಷ್ಟು ಶೀಘ್ರವಾಗಿ ಮುಗಿಯಬೇಕು. ಆರೋಪಿ ಹಾಗು ಆತನ ಹಿಂದೆ ಯಾರೇ ಇದ್ದರೂ ಅವರೆಲ್ಲರಿಗೂ ಕಾನೂನು ಪ್ರಕಾರ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಅದಕ್ಕಾಗಿ ಒಬ್ಬ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರನ್ನು ಈ ಪ್ರಕರಣದ ವಿಚಾರಣೆಗೆ ಸಹಕರಿಸಲು ಸರಕಾರ ನೇಮಿಸಬೇಕು ಎಂದು ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.


Provided by

ಇತ್ತೀಚಿನ ಸುದ್ದಿ