ತಿಮ್ಮಪ್ಪನ ಲಡ್ಡು ಮಾತ್ರವಲ್ಲ, ನಾವು ದಿನ ನಿತ್ಯ ಸೇವಿಸುವ ಆಹಾರ ಎಷ್ಟು ಸುರಕ್ಷಿತ?
ತಿರುಪತಿ ತಿಮ್ಮಪ್ಪನ ಲಡ್ಡುಗೆ ಪ್ರಾಣಿಗಳ ಕೊಬ್ಬು ಮತ್ತು ಕಳಪೆ ಮಟ್ಟದ ಹಾನಿಕಾರಕ ತುಪ್ಪ ಬಳಸಿರುವ ವಿಚಾರ ಇದೀಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಇದರ ನಡುವೆಯೇ ನಾವು ಪ್ರತಿನಿತ್ಯ ಸೇವನೆ ಮಾಡುವ ಆಹಾರಗಳು ಎಷ್ಟೊಂದು ಸುರಕ್ಷಿತ ಎನ್ನುವ ಆತಂಕವನ್ನ ಪ್ರಜ್ಞಾವಂತ ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ತಿರುಪತಿ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಾರೆ. ಇಂತಹ ಸ್ಥಳದಲ್ಲೇ, ಕಳಪೆ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆಯೆಂದರೆ, ಜನಸಾಮಾನ್ಯರು ಬಳಸುವ ದಿನ ಬಳಕೆಯ ವಸ್ತುಗಳು ಎಷ್ಟೊಂದು ಕಳಪೆ ವಸ್ತುಗಳು ಪೂರೈಕೆಯಾಗುತ್ತಿರಬೇಡ ಎನ್ನುವ ಅನುಮಾನಗಳು ಕೇಳಿ ಬಂದಿವೆ.
ನಾವು ಸೇವಿಸುವ ಪ್ರತಿಯೊಂದು ಆಹಾರದಲ್ಲೂ ಕಲಬೆರಕೆಗಳು ನಡೆಯುತ್ತಿದೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಹಣ್ಣು ಹಂಪಲು ತಿನ್ನೋಣ ಎಂದರೆ, ಅದನ್ನು ವಿಷಕಾರಿ ಕೀಟನಾಶಕಗಳನ್ನು ಸಿಂಪಡಿಸಿ ಬೆಳೆದಿರುತ್ತಾರೆ. ಬೇಕರಿ ತಿನಿಸುಗಳನ್ನು ಅದ್ಯಾವ ಎಣ್ಣೆಯಿಂದ ಖರಿದು ತಯಾರಿಸುತ್ತಾರೋ ಯಾರಿಗೆ ಗೊತ್ತು?
ಆಹಾರ ಪದಾರ್ಥಗಳು ಹಾಳಾಗ ಬಾರದು ಅಂತ ಅದಕ್ಕೆ ರಾಸಾಯನಿಕಗಳನ್ನು ಬೆರೆಸಿ ಮಾರಾಟ ಮಾಡುತ್ತಿದ್ದಾರೆ. ಭಾರತದ ಸಾಕಷ್ಟು ಸಾಂಬರ್ ಪೌಡರ್ ಗಳು ವಿದೇಶಿ ಮಾರುಕಟ್ಟೆಯಲ್ಲಿ ನಿಷೇಧಿಸಲ್ಪಟ್ಟಿವೆ. ಆದರೆ ಅವುಗಳು ಭಾರತದಲ್ಲಿ ಇನ್ನೂ ಮಾರಾಟವಾಗುತ್ತಲೇ ಇವೆ. ವಿದೇಶಗಳಲ್ಲಿ ನಿಷೇಧಿಸಲಾಗಿರುವ ಕೆಲವೊಂದು ಮಾತ್ರೆಗಳನ್ನು ಭಾರತದಲ್ಲಿ ಇನ್ನೂ ಮಾರಾಟ ಮಾಡುತ್ತಲೇ ಇರುತ್ತಾರೆ. ನಾಗರಿಕರ ಆರೋಗ್ಯದ ಬಗ್ಗೆ ಇಲ್ಲಿ ಕಾಳಜಿ ವಹಿಸುವವರೇ ಇಲ್ಲ ಎನ್ನುವಂತಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಭಾರತದ ಸಾಕಷ್ಟು ಹೊಟೇಲ್ ಗಳಲ್ಲಿ ನೈರ್ಮಲ್ಯ ಎಂಬುವುದೇ ಕಾಣಸಿಗುವುದಿಲ್ಲ, ಆದರೂ ಆಹಾರ ಸುರಕ್ಷತಾ ಅಧಿಕಾರಿಗಳು ಯಾಕೆ ಕ್ರಮಕೈಗೊಳ್ಳುವುದಿಲ್ಲ ಎನ್ನುವ ಪ್ರಶ್ನೆಗಳಿವೆ. ನಗರ ಪ್ರದೇಶಗಳಲ್ಲಿನ ಹೊಟೇಲ್ ಗಳಿಗಿಂತ, ಬೀದಿ ಬದಿಯಲ್ಲಿರುವ ಮೊಬೈಲ್ ಕ್ಯಾಂಟಿನ್ ಗಳೇ ಎಷ್ಟೋ ವಾಸಿ ಎನ್ನುವಂತಹ ಸ್ಥಿತಿ ಇದೆ. ನಮ್ಮ ರಾಜ್ಯದಲ್ಲಿ ಕೂಡ ಪ್ರಮುಖ ನಗರಗಳಲ್ಲಿ ಕೊಳಕು ಹೊಟೇಲ್ ಗಳನ್ನು ದಿನನಿತ್ಯ ನೋಡಬಹುದಾಗಿದೆ.
ಇನ್ನೊಂದೆಡೆ ಮಾಂಸಾಹಾರಗಳು ಕೂಡ ಸುರಕ್ಷಿತವಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಮೀನಿಗೆ ಕೂಡ ಬೇಗ ಹಾಳಾಗಬಾರದು ಎಂದು ರಾಸಾಯನಿಕ ಬಳಕೆ ಮಾಡಲಾಗ್ತಿದೆ. ಇದು ಜನರ ದೇಹಕ್ಕೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಮಾಂಸದ ಅಂಗಡಿಗಳಲ್ಲಿ ನೈರ್ಮಲ್ಯಗಳು ಮರೆಯಾಗುತ್ತಿವೆ.
ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವುದು ಮಾತ್ರವೇ ಚರ್ಚೆಯಾಗುತ್ತಿದೆ. ಇಲ್ಲಿ ಸಸ್ಯಾಹಾರಿಯೋ ಮಾಂಸಾಹಾರಿಯೋ ಎನ್ನುವುದಕ್ಕಿಂತಲೂ, ನಾವು ತಿನ್ನುವ ಆಹಾರಗಳ ಸುರಕ್ಷತೆ ಎಷ್ಟಿದೆ ಎನ್ನುವ ಪ್ರಶ್ನೆಗಳು ಕೂಡ ಮೂಡಬೇಕು. ಜನರು ಇದರ ವಿರುದ್ಧ ಮಾತನಾಡಿದಾಗ ಮಾತ್ರವೇ ಇಂತಹ ಅನ್ಯಾಯಗಳು ನಿಲ್ಲಲು ಸಾಧ್ಯ. ಸಸ್ಯಹಾರಿಯಾಗಲಿ, ಮಾಂಸಾಹಾರಿಯಾಗಲಿ ಆತನಿಗೆ ಆತನ ಆಹಾರವನ್ನು ಆಯ್ಕೆ ಮಾಡುವ ಹಕ್ಕಿದೆ. ತಿರುಪತಿಯಲ್ಲಿ ನಡೆದ ಘಟನೆ ಅತ್ಯಂತ ಅಮಾನವೀಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ, ಕೇವಲ ತಿರುಪತಿಯಲ್ಲಿ ಮಾತ್ರವಲ್ಲ, ನಾವು ದಿನ ನಿತ್ಯ ಅಂಗಡಿಗಳಿಂದ ಖರೀದಿ ಮಾಡುವ ವಸ್ತುಗಳು ಎಷ್ಟೊಂದು ಶುದ್ಧತೆಯಿಂದ ಕೂಡಿದೆ ಎನ್ನುವುದನ್ನು ತಿಳಿಯಬೇಕಿದೆ. ಜನರು ನಿಮ್ಮ ಮನೆಯಲ್ಲೇ ತಯಾರಿಸಿ ತಿನ್ನುವ ಸಂಪ್ರದಾಯವನ್ನ ಮುಂದುವರಿಸಿ, ಯಾಕೆಂದರೆ, ಹೊರಗಿನ ಆಹಾರ ಈಗ ಸುರಕ್ಷಿತ ಎಂದು ನಂಬದ ಪರಿಸ್ಥಿತಿಗಳು ಸೃಷ್ಟಿಯಾಗಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: