ನೋಟಾಕ್ಕಿಂತಲೂ ಕಡಿಮೆ ಮತ ಪಡೆದ ಬಿಜೆಪಿ | ಪಂಜಾಬ್ ನಲ್ಲಿ ಕಮಲಕ್ಕೆ ಮುಜುಗರ
18/02/2021
ಪಂಜಾಬ್: ಕೇಂದ್ರ ಸರ್ಕಾರದ ಮೂರು ನೂತನ ವಿವಾದಿತ ಕೃಷಿ ಕಾಯ್ದೆಯನ್ನು ವಿರೋಧಿಸಿ ಪಂಜಾಬ್ ನಲ್ಲಿ ಜನರು ಮತ ಚಲಾಯಿಸಿದ್ದು, ಅಮೃತಸರ ಮಹಾನಗರ ಪಾಲಿಕೆಯ 37 ನೇ ವಾರ್ಡ್‌ನಲ್ಲಿ ಬಿಜೆಪಿ ನೋಟಾಕ್ಕಿಂತಲೂ ಕಡಿಮೆ ಮತ ಪಡೆದು ಮುಜುಗರಕ್ಕೀಡಾಗಿದೆ.
8 ಮುನ್ಸಿಪಲ್ ಕಾರ್ಪೋರೇಷನ್‌ಗಳ 2,302 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಬುಧವಾರ ಅದರ ಫಲಿತಾಂಶ ಪ್ರಕಟವಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದರೆ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಇದಲ್ಲದೇ ಬಟಿಂಡಾದಲ್ಲಿ 53 ವರ್ಷಗಳ ಬಳಿಕ ಮೇಯರ್ ಸ್ಥಾನವನ್ನು ಕೂಡ ಕಾಂಗ್ರೆಸ್ ಪಡೆದುಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಅಮೃತಸರ ಮಹಾನಗರ ಪಾಲಿಕೆಯ 37ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಮನೋಹರ್ ಸಿಂಗ್ ಕೇವಲ 52 ಮತಗಳನ್ನು ಪಡೆದುಕೊಂಡಿದ್ದಾರೆ. ಈ ವಾರ್ಡ್ ನಲ್ಲಿ ನೋಟಾಕ್ಕೆ 60 ಮತಗಳು ಬಿದ್ದಿವೆ. ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚಾಗಿ ನೋಟಾಕ್ಕೆ ಮತಗಳು ಬಿದ್ದಿದ್ದು, ಇದು ಬಿಜೆಪಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ.