ನರ್ಸ್ ಗೆ ಕಪಾಳ ಮೋಕ್ಷ ಮಾಡಿದ್ದ ಡಾಕ್ಟರ್ ಹೆಣವಾಗಿ ಪತ್ತೆ!

ಲಕ್ನೋ: ಡಾಕ್ಟರ್ ಹಾಗೂ ನರ್ಸ್ ನಡುವೆ ನಡೆದ ಫೈಟ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ನರ್ಸ್ ಡಾಕ್ಟರ್ ನ ಕೆನ್ನೆಗೆ ಬಾರಿಸಿದ್ದು, ಈ ವೇಳೆ ಡಾಕ್ಟರ್ ತಿರುಗಿ ನರ್ಸ್ ಕೆನ್ನೆಗೆ ಬಾರಿಸಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆದ ಬಳಿಕ ನರ್ಸ್ ನ್ನು ಅಮಾನತು ಮಾಡಲಾಗಿತ್ತು. ಇದೀಗ ವಿಡಿಯೋದಲ್ಲಿ ನರ್ಸ್ ನ ಕೆನ್ನೆಗೆ ಬಾರಿಸಿದ್ದ ಅದೇ ಡಾಕ್ಟರ್ ತನ್ನ ಸರ್ಕಾರಿ ಮನೆಯಲ್ಲಿಯೇ ಸಾವನ್ನಪ್ಪಿದ್ದು, ಅವರ ಮೃತದೇಹ ಪತ್ತೆಯಾಗಿದೆ.
ಉತ್ತರಪ್ರದೇಶದ ರಾಮ್ ಪುರ ನಿವಾಸಿ ಡಾ.ಬಿ.ಎಂ. ನಗರ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಸಾವಿಗೂ ಕೆಲವು ದಿನಗಳ ಹಿಂದೆ ನರ್ಸ್ ಹಾಗೂ ಅವರ ನಡುವೆ ಜಗಳ ನಡೆದು ಪರಸ್ಪರ ಕೆನ್ನೆಗೆ ಬಾರಿಸಿಕೊಂಡಿದ್ದರು. ಈ ಘಟನೆಯ ಬಳಿಕ ನರ್ಸ್ ನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದಾಗಿ ಕೆಲವೇ ದಿನಗಳಲ್ಲಿ ನರ್ಸ್ ನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದಲ್ಲದೇ ಅವರು ನೀಡಿರುವ ದೂರಿನಲ್ಲಿ ತನಗೆ ಮತ್ತು ತನ್ನ ಕುಟುಂಬಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಇದಾದ ಬಳಿಕ ರಾಮ್ ಪುರದಲ್ಲಿರುವ ನಿವಾಸದಲ್ಲಿಯೇ ಅವರ ನಿವಾಸದಲ್ಲಿ ಶವವಾಗಿ ಅವರು ಪತ್ತೆಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಬಿಎಂ ನಗರ್ ಅವರಿಗೆ ಶುಗರ್ ಮತ್ತು ಬಿಪಿ ಹೆಚ್ಚಳವಾಗಿತ್ತು ಎಂದು ಹೇಳಲಾಗಿದೆ. ಆದರೆ ಕೆಲವು ದಿನಗಳ ಹಿಂದೆ ನಡೆದಿರುವ ಘಟನೆಗಳು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಮೃತರ ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬಸ್ಥರು ಸಮ್ಮತಿಸಿಲ್ಲವಾದ ಕಾರಣ, ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಬಿಟ್ಟುಕೊಡಲಾಗಿದೆ.