ನ್ಯಾಯಾಲಯ ಆವರಣದಲ್ಲಿಯೇ ವಕೀಲನ ಬರ್ಬರ ಹತ್ಯೆ
27/02/2021
ವಿಜಯನಗರ: ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ವಕೀಲ, ಕಾಂಗ್ರೆಸ್ ಮುಖಂಡ ತಾರಿಹಳ್ಳಿಯ 48 ವರ್ಷ ವಯಸ್ಸಿನ ವೆಂಕಟೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾರಿಹಳ್ಳಿ ಅವರ ಸಂಬಂಧಿ ಮನೋಜ್ ಎಂಬುವರು ಮಚ್ಚಿನಿಂದ ಕುತ್ತಿಗೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕುರ್ಚಿ ಮೇಲೆ ಕುಳಿತುಕೊಂಡು ನೋಟರಿ ಮಾಡುತ್ತಿದ್ದಾಗ ತಾರಿಹಳ್ಳಿ ಅವರ ಮೇಲೆ ಏಕಾ ಏಕಿ ಆರೋಪಿಯು ದಾಳಿ ನಡೆಸಿದ್ದಾನೆ. ಪರಿಣಾಮವಾಗಿ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯಿಂದ ನ್ಯಾಯಾಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗುಂಪುಗೂಡಿದ ಜನರನ್ನು ಪೊಲೀಸರು ಅಲ್ಲಿಂದ ಕಳುಹಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಆರೋಪಿಯನ್ನು ಸ್ಥಳದಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.