ಒಬ್ಬ ವಿದ್ಯಾರ್ಥಿಯ ಸಾವು ಸಂಭವಿಸಿದರೂ ಸರ್ಕಾರವೇ ಹೊಣೆ | ಆಂಧ್ರಪ್ರದೇಶ-ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ನವದೆಹಲಿ: ಕೊವಿಡ್ 19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಡುವೆಯೇ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರಪ್ರದೇಶ ಹಾಗೂ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ಈ ಪರೀಕ್ಷೆಯಿಂದ ಯಾವುದೇ ಸಾವು ವರದಿಯಾದರೂ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದ್ದು, ಅಂತಿಮ ನಿರ್ಧಾರ ತಿಳಿಸುವಂತೆ ಸೂಚಿಸಿತು. ಒಂದೊಮ್ಮೆ ಓರ್ವ ವಿದ್ಯಾರ್ಥಿ ಮೃತಪಟ್ಟರೂ ಆ ವಿದ್ಯಾರ್ಥಿ ಕುಟುಂಬಕ್ಕೆ 1 ಕೋಟಿ ರೂ. ನೀಡಬೇಕು ಎಂದು ಹೇಳಿದೆ.
ದೇಶದ ಎಲ್ಲ ರಾಜ್ಯಗಳು ಪರೀಕ್ಷೆ ರದ್ದು ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ, ನೀವೇಕೆ ಪರೀಕ್ಷೆ ರದ್ದು ಮಾಡುವ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಇದೇ ವೇಳೆ ಆಂಧ್ರ ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ.
ಕೊರೊನಾ ಎರಡನೇ ಅಲೆ ಕಾರಣದಿಂದ ಸ್ಥಗಿತಗೊಂಡಿರುವ 12ನೇ ತರಗತಿ ಪರೀಕ್ಷೆಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಜಾರಿಗೊಳಿಸಲು ಭಾರತದ ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ.
ರಾಜ್ಯಗಳ ಬೋರ್ಡ್ ಪರೀಕ್ಷೆಗೆ ಏಕರೂಪ ಮೌಲ್ಯಮಾಪನ ಪದ್ಧತಿ ಬೇಡ ಎಂದಿರುವ ಘನ ನ್ಯಾಯಾಲಯ, ಮೌಲ್ಯಮಾಪನ ವ್ಯವಸ್ಥೆ ತೀರ್ಮಾನ ರಾಜ್ಯಗಳಿಗೆ ಬಿಟ್ಟ ನಿರ್ಧಾರ ಎಂದು ಅಭಿಪ್ರಾಯಪಟ್ಟಿದೆ.