“ಒಬ್ಬನ ಚಡ್ಡಿ ಇನ್ನೊಬ್ಬನ ಕೈಯಲ್ಲಿದೆ, ಯಾರು ಬೆತ್ತಲೆ ಮಾಡುತ್ತಾರೆ ಗೊತ್ತಿಲ್ಲ”
ಬೆಳಗಾವಿ: ಅವ್ರು ಗೆದ್ದು ಬರಬೇಕಲ್ಲ. ಗೆದ್ದರೂ ಒಂದಾಗಬೇಕಲ್ಲ? ಎಲ್ಲರೂ ಕುಸ್ತಿ ಅಖಾಡದಲ್ಲಿದ್ದಾರೆ. ಒಬ್ಬನ ಚಡ್ಡಿ ಇನ್ನೊಬ್ಬನ ಕೈಯಲ್ಲಿದೆ. ಯಾರು ಯಾರನ್ನು ಬೆತ್ತಲೆ ಮಾಡುತ್ತಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ನೊಳಗಿನ ಮುಖ್ಯಮಂತ್ರಿ ಅಭ್ಯರ್ಥಿ ರೇಸ್ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ- ಪರಮೇಶ್ವರ ಸೇರಿ ಮೂರು ಪ್ರಬಲ ಗುಂಪುಗಳಿವೆ. ಇದರ ನಡುವೆ ಶಾಮನೂರು ಶಿವಶಂಕರಪ್ಪ ಅವರು ನನಗೂ 91 ವಯಸ್ಸಾಗಿದೆ. ನಾನು ಏಕೆ ಮುಖ್ಯಮಂತ್ರಿಯಾಗಬಾರದು ಎನ್ನುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿಗರದ್ದು ಮುಖ್ಯಮಂತ್ರಿ ಹುದ್ದೆ ಎಂಬುದು ತಿರುಕನ ಕನಸಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ತನ್ನ ಒಳ ಜಗಳ, ಒಣ ಪ್ರತಿಷ್ಠೆಗಳಿಂದ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೂಡ ಸೋಲನುಭವಿಸಿತ್ತು. ಸಮ್ಮಿಶ್ರ ಸರ್ಕಾರದಲ್ಲೂ ಕಾಂಗ್ರೆಸ್ ನೊಳಗೆ ಒಗ್ಗಟ್ಟು ಇರಲಿಲ್ಲ. ಈ ಜಗಳಗಳಿಂದಾಗಿಯೇ ಕಾಂಗ್ರೆಸ್ ಇಂದು ಇಂತಹ ಸ್ಥಿತಿಯಲ್ಲಿದೆ ಎನ್ನುವ ಆರೋಪಗಳು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇನ್ನೊಂದೆಡೆ ಬಿಜೆಪಿಯ ಸ್ಥಿತಿಯ ಇದೇ ರೀತಿಯದ್ದಾಗಿದೆ. ಇನ್ನೂ ಜೆಡಿಎಸ್ ಆಟಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.