20 ವರ್ಷಗಳ ಹಿಂದೆ ನಾಪತ್ತೆಯಾದ ಮಾನಸಿಕ ಅಸ್ವಸ್ಥ ಪಾಕಿಸ್ತಾನದ ಜೈಲಿನಿಂದ ಬಿಡುಗಡೆ | ಅಷ್ಟಕ್ಕೂ ಈತ ಅಲ್ಲಿಗೆ ತಲುಪಿದ್ದು ಹೇಗೆ? - Mahanayaka
3:14 AM Wednesday 11 - December 2024

20 ವರ್ಷಗಳ ಹಿಂದೆ ನಾಪತ್ತೆಯಾದ ಮಾನಸಿಕ ಅಸ್ವಸ್ಥ ಪಾಕಿಸ್ತಾನದ ಜೈಲಿನಿಂದ ಬಿಡುಗಡೆ | ಅಷ್ಟಕ್ಕೂ ಈತ ಅಲ್ಲಿಗೆ ತಲುಪಿದ್ದು ಹೇಗೆ?

05/11/2020

ಅವನ ಹೆಸರು “ಬಿರ್ಜು ಕುಲು”. ಒಡಿಶಾದ ಸುಂದರ್ಘ್ ಜಿಲ್ಲೆಯ ಜಂಗತೋಲಿ ಗ್ರಾಮದ ವ್ಯಕ್ತಿ. 20 ವರ್ಷಗಳ ಹಿಂದೆ ಒಂದು ದಿನ ಆತ ದಿಢೀರ್ ಆಗಿ ನಾಪತ್ತೆಯಾಗುತ್ತಾನೆ.  ಆ ಬಳಿಕ ಈತನನ್ನು ಯಾರೂ ಕಂಡಿಲ್ಲ. ಈತ ಎಲ್ಲಿ ಹೋದ ಎನ್ನುವುದು ಅವರ ಕುಟುಂಬಸ್ಥರಿಗೆ ಕೂಡ ಗೊತ್ತಿರಲಿಲ್ಲ. ಬಿರ್ಜು, ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದ. 20 ವರ್ಷಗಳ ಹಿಂದೆ ಆತ ನಾಪತ್ತೆಯಾಗಿದ್ದರೂ, ಆತ ಏನಾದ ಎನ್ನುವುದು ಈಗ ಬಯಲಾಗಿದೆ.

ಹೌದು..! ಬಿರ್ಜು ಎಂಬ ಬುಡಕಟ್ಟು ಸಮುದಾಯದ ಯುವಕ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಯುವಕನಾಗಿದ್ದ. ಈತ ನಾಪತ್ತೆಯಾದ ಬಳಿಕ ಯಾರು ಕೂಡ ಈತ ನಾಪತ್ತೆಯಾಗಿದ್ದಾನೆ ಎಂಬ ಬಗ್ಗೆ ದೂರು ಕೂಡ ನೀಡಿರಲಿಲ್ಲ. ಈತ ಮಾನಸಿಕ ರೋಗದಿಂದ ಬಳಲುತ್ತಿದ್ದ ಕಾರಣ ಈತ ಮರಳಿ ಬರಲು ಸಾಧ್ಯವಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಆತ ಮರಳಿ ಬಂದಾಗ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಅಲ್ಲದೇ ಆತ ಇಷ್ಟು ದಿನ ಎಲ್ಲಿದ್ದ ಎನ್ನುವುದನ್ನು ಕೇಳಿ ದಂಗಾಗಿ ಬಿಟ್ಟಿದ್ದಾರೆ.




 

ಬಿರ್ಜು ಎಲ್ಲಿ ಹೋಗಿದ್ದ?

20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಿರ್ಜು ಹೋಗಿದ್ದು, “ಪಾಕಿಸ್ತಾನ”ಕ್ಕೆ ಅವನು ಅದು ಹೇಗೆ ಗಡಿದಾಟಿ ಪಾಕಿಸ್ತಾನಕ್ಕೆ ಹೋದನೋ ತಿಳಿದಿಲ್ಲ. ಪಾಕಿಸ್ತಾನಕ್ಕೆ ಅಂತೂ ಹೋಗಿ ಬಿಟ್ಟಿದ್ದಾನೆ. ಅಲ್ಲಿ ಅವನನ್ನು ಪಾಕಿಸ್ತಾನದ ಸೈನಿಕರು ವಶಪಡಿಸಿಕೊಂಡು ಜೈಲಿನಲ್ಲಿಟ್ಟಿದ್ದಾರೆ. ಅದೂ, ಯುದ್ಧ ಕೈದಿಯಾಗಿ. ಬರೋಬ್ಬರಿ 20 ವರ್ಷಗಳ ಕಾಲ ಬಿರ್ಜು ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ಬಂಧಿತನಾಗಿದ್ದ.

ಬಿಡುಗಡೆಯಾಗಿದ್ದು ಹೇಗೆ?

ಬಿರ್ಜು 20 ವರ್ಷಗಳಿಂದ ಜೈಲಿನಲ್ಲಿದ್ದರೂ, ಒಂದೇ ಒಂದು ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸಲಿಲ್ಲ. ಪಾಕಿಸ್ತಾನದ ಕಾನೂನಿನ ಪ್ರಕಾರ, ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸದ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಂತೆಯೇ ಬಿರ್ಜುವನ್ನು ಅಕ್ಟೋಬರ್ 26ರಂದು ಗಡಿಯಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ಈತನನ್ನು ಹಸ್ತಾಂತರ ಮಾಡಲಾಗಿದ್ದರೂ, ಆತನ ಕುಟುಂಬಕ್ಕೆ ಈ ವಿಚಾರ ಗೊತ್ತೇ ಇರಲಿಲ್ಲ

20 ವರ್ಷಗಳ ಹಿಂದೆ ಮನೆ ತೊರೆದು ಬಂದಿದ್ದ ಬಿರ್ಜು ಎಂಬ ಯುವಕ, ಪಾಕಿಸ್ತಾನದಿಂದ ಕೈದಿಗಳನ್ನು ವಾಪಸ್ ಕಳಿಸುವ ಸಂದರ್ಭದಲ್ಲಿ ನಮಗೆ ಸಿಕ್ಕಿದ್ದಾನೆ. ಅವನನ್ನು ವಾಗಾ ಗಡಿಯಿಂದ ಕರೆ ತರಲಾಗುವುದು ಎಂದು ಸುಂದರ್ಘ್ ನ ಪೊಲೀಸ್ ವರಿಷ್ಠಾಧಿಕಾರಿ, ಸಾಗರಿಕಾನಾಥ್ ಹೇಳಿದ್ದಾರೆ.  ಬಿರ್ಜು ತನ್ನ ಪೋಷಕರ ಚಿತ್ರವನ್ನು ಗುರುತಿಸಿದ್ದರಿಂದಾಗಿ ಆತ ತನ್ನ ಕುಟುಂಬವನ್ನು ಸೇರಿದ್ದಾನೆ. ಇನ್ನೂ ಬಿರ್ಜುವಿನ ಆಗಮನವಾಗುತ್ತಿದ್ದಂತೆಯೇ,  ಅವರ ಕುಟುಂಬಸ್ಥರು ಬಹಳ ಸಂತೋಷಪಟ್ಟಿದ್ದಾರೆ.  ಬಿರ್ಜುವನ್ನು ತಮ್ಟೆ ಭಾರಿಸಿ ಕುಣಿದು ಸ್ವಾಗತಿಸಿದರು.


ಇತ್ತೀಚಿನ ಸುದ್ದಿ