ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸಿ ಕೆಂಪೇಗೌಡ ಜಯಂತಿ ಆಚರಣೆ ಅರ್ಥಹೀನ: ಸಚಿನ್ ಸರಗೂರು
ಹಾಸನ: ನಾಡ ಪ್ರಭು ಕೆಂಪೇಗೌಡರ ಹೆಸರಿನಿಂದ ಲಾಭ ಪಡೆದುಕೊಳ್ಳುವ ರಾಜಕೀಯ ನಾಯಕರು, ಆ ಬಳಿಕ ಕೆಂಪೇಗೌಡರು ಮಾತ್ರವಲ್ಲದೇ ಒಕ್ಕಲಿಗ ಸಮುದಾಯವನ್ನೂ ಮರೆತು ಬಿಡುವುದು ವಿಪರ್ಯಾಸವಾಗಿದೆ ಎಂದು ಹಾಸನದ ಯುವ ಮುಖಂಡ ಸಚಿನ್ ಸರಗೂರು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಂಪೇಗೌಡರ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಒಕ್ಕಲಿಗ ಮುಖಂಡರು ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರಾಜಕೀಯದಲ್ಲಿಯೂ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಮುಖಂಡರು, ತಮ್ಮ ಸಮುದಾಯದ ಅಭಿವೃದ್ಧಿಗೆ ಎಷ್ಟು ಒತ್ತನ್ನು ನೀಡುತ್ತಿದ್ದಾರೆ ಎನ್ನುವುದನ್ನು ಯೋಚಿಸಬೇಕಿದೆ ಎಂದು ಅವರು ಹೇಳಿದರು.
ಕೆಂಪೇಗೌಡರನ್ನು ಕೇವಲ ಬೆಂಗಳೂರಿಗೆ ಮಾತ್ರವೇ ಸೀಮಿತಗೊಳಿಸಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಒಕ್ಕಲಿಗ ಸಮುದಾಯದ ಓಲೈಕೆಗೆ ಕೆಂಪೇಗೌಡರ ಬಗ್ಗೆ ಮಾತನಾಡುವ ನಾಯಕರು, ಈವರೆಗೆ ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸಿದ್ದಾರೆ. ಹಾಸನ ಜಿಲ್ಲೆ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಯಾಗಿದ್ದು, ಇಲ್ಲಿ ಕೆಂಪೇಗೌಡರ ಪುತ್ಥಳಿಯೇ ಇಲ್ಲ. ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ಫೋಟೋಗೆ ಹಾರಾರ್ಪಣೆ ಮಾಡಿ ಆಚರಿಸುವಂತಹ ಸ್ಥಿತಿ ಇಂದಿಗೂ ಹಾಸನದಲ್ಲಿದೆ ಎಂದು ಸಚಿನ್ ಸರಗೂರು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗ ಸಮುದಾಯವು ಕೃಷಿಯನ್ನು ಅವಲಂಬಿಸಿರುವ ಸಮುದಾಯವಾಗಿದೆ. ಸಮುದಾಯದ ಯುವಕರು ಉತ್ತಮ ಶಿಕ್ಷಣವನ್ನು ಪಡೆದುಕೊಂಡರೂ, ಉದ್ಯೋಗ ಸಿಗದೇ ಕೂಲಿ ಕೆಲಸಗಳನ್ನು ಆಶ್ರಯಿಸುವಂತಹ ಸ್ಥಿತಿ ಇಂದಿಗೂ ಇದೆ. ಒಕ್ಕಲಿಗರ ಸಂಘದಲ್ಲಿ ಚುನಾವಣೆಯಲ್ಲಿ ಗೆದ್ದವರು ಸಮುದಾಯದ ಯುವಕರಿಗೆ ಉದ್ಯೋಗ ಭದ್ರತೆ ಒದಗಿಸಲು ಏನು ಕ್ರಮಕೈಗೊಂಡಿದ್ದಾರೆ? ನಮ್ಮ ಯುವಕರಿಗೆ ಉದ್ಯೋಗ ಇಲ್ಲ ಎಂದು ಸರ್ಕಾರಕ್ಕೆ ಎಷ್ಟು ಮನವಿ ನೀಡಿದ್ದಾರೆ? ಎಷ್ಟು ಪ್ರತಿಭಟನೆ ಮಾಡಿದ್ದಾರೆ? ಯುವಕರಿಗೆ ಉದ್ಯೋಗ ಕೊಡಿಸಲು ಯಾಕೆ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಹಾಸನದಲ್ಲಿ ಒಕ್ಕಲಿಗರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ಹಾಸ್ಟೆಲ್ ಸೌಲಭ್ಯಗಳು ಕೂಡ ಇಲ್ಲವಾಗಿದೆ. ಇದರಿಂದಾಗಿ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು 40ರಿಂದ 45 ಕಿ.ಮೀ. ದೂರದಿಂದ ದಿನ ನಿತ್ಯ ಪ್ರಯಾಣಿಸುತ್ತಿದ್ದಾರೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗುತ್ತಿದ್ದರೂ, ಬಸ್ ವ್ಯವಸ್ಥೆ ಮಾಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿಲ್ಲ. ಸಮುದಾಯದ ಸಂಘಟನೆಯ ಮುಖಂಡರುಗಳಾಗಿ, ಮಕ್ಕಳ ಶಿಕ್ಷಣದ ಅಭಿವೃದ್ಧಿಯ ಬಗ್ಗೆ ಕಾಳಜಿವಹಿಸುತ್ತಿಲ್ಲ. ಅವರ ಶೈಕ್ಷಣಿಕ ಏಳಿಗೆಗಾಗಿ ಪ್ರೋತ್ಸಾಹಿಸುತ್ತಿಲ್ಲ ಒಕ್ಕಲಿಗರ ಸಂಘಕ್ಕೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಚುನಾವಣೆಯ ಸಂದರ್ಭ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ಮಂತ್ರ ಜಪಿಸಿದರೂ, ಗೆದ್ದ ಬಳಿಕ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕೆ ಕೆಲಸ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಕೆಂಪೇಗೌಡರ ಹೆಸರಿನಲ್ಲಿ ರಾಜಕೀಯ ಮಾಡುವ ಮುಖಂಡರಾಗಲಿ, ರಾಜಕಾರಣಿಗಳಾಗಲಿ, ಒಕ್ಕಲಿಗ ಸಂಘದ ನಾಯಕರಾಗಲಿ, ಹಾಸನದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಿಸಲು ವಿಫಲರಾಗಿದ್ದಾರೆ. ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ಹಾರಾರ್ಪಣೆ ಮಾಡಲು ಕೂಡ ಒಂದೇ ಒಂದು ಪುತ್ಥಳಿ ಇಲ್ಲ. ಕೆಂಪೇಗೌಡರ ಹೆಸರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವವರು ಮೊದಲು ಸಮುದಾಯದ ಬಗ್ಗೆ ಕಾಳಜಿ ವಹಿಸಬೇಕು. ಸಮುದಾಯದ ಅಭಿವೃದ್ಧಿಯ ಮಾಡುವ ಮೂಲಕ ನಿಜ ಅರ್ಥದಲ್ಲಿ ಕೆಂಪೇಗೌಡರ ಜಯಂತಿ ಆಚರಿಸಬೇಕಿದೆ. ಸಮುದಾಯವನ್ನು ನಿರ್ಲಕ್ಷಿಸಿ ಕೆಂಪೇಗೌಡರ ಜಯಂತಿ ಮಾಡಿದರೆ ಅದು ಕೇವಲ ಕಾಟಾಚಾರದ ಕಾರ್ಯಕ್ರಮವಾಗಬಹುದಷ್ಟೆ ಎಂದು ಸಚಿನ್ ಸರಗೂರು ಅಭಿಪ್ರಾಯಪಟ್ಟರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka