ಒಳ ಉಡುಪು ಕದ್ದ ಸ್ನೇಹಿತನನ್ನು ಚೂರಿಯಿಂದ ಇರಿದು ಬರ್ಬರ ಹತ್ಯೆ
ಕಾನ್ಪುರ: ಒಳ ಉಡುಪು ಕದ್ದ ವಿಚಾರದಲ್ಲಿ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಯುವಕನೋರ್ವ ತನ್ನ ಸಹೋದ್ಯೋಗಿಯನ್ನೇ ಹತ್ಯೆ ಮಾಡಿದ್ದಾನೆ.
ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ನಡುವೆ ಈ ಗಲಾಟೆ ನಡೆದಿದೆ. ವಿವೇಕ್ ಶುಕ್ಲಾ ಎಂಬ ತನ್ನ ಸಹೋದ್ಯೋಗಿಯನ್ನು ಬಾಂಡಾ ಮೂಲದ ಅಜಯ್ ಕುಮಾರ್ ಹತ್ಯೆ ಮಾಡಿದ್ದಾನೆ.
ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದ ವಿವೇಕ್ ಮತ್ತು ಅಜಯ್ ಕುಮಾರ್ ಅನ್ಯೋನ್ಯವಾಗಿದ್ದರು. ಅಜಯ್ ಕುಮಾರ್ ನನ್ನು ತಮಾಷೆ ಮಾಡಬೇಕು ಎಂದು ವಿವೇಕ್ ಆತನ ಒಳ ಉಡುಪನ್ನು ಕದ್ದು ತಾನು ಧರಿಸಿಕೊಂಡಿದ್ದಾನೆ.
ಈ ತಮಾಷೆಯು ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ವಿವೇಕ್ ಮೇಲೆ ಅಜಯ್ ಕುಮಾರ್ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಸಮೀಪವೇ ಇದ್ದ ಚಾಕುವನ್ನು ತೆಗೆದು ವಿವೇಕ್ ನನ್ನು ಇರಿದಿದ್ದಾನೆ.
ಚೂರಿಯಿಂದ ಇರಿದ ಬಳಿಕ ಅಜಯ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ರೂಮ್ ನಲ್ಲಿ ಇದ್ದ ಇತರರು ವಿವೇಕ್ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ವಿವೇಕ್ ಸಾವನ್ನಪ್ಪಿದ್ದಾರೆ.