“ಓಂ ಕೊರೊನಾ ಭಾಗ್ ಸ್ವಾಹ” | ನೋಡಿ, ಬಂದಿದೆ ಮತ್ತೊಂದು ವಿಕೃತಿ

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಕೆಲವು ಅವಿವೇಕಿಗಳು ಮಾಡುವ ಕೆಲಸಗಳಿಗೆ ನಗಬೇಕೋ ಅಳಬೇಕೋ ಎನ್ನುವ ಇಕ್ಕಟ್ಟಿನಲ್ಲಿ ಜನ ಸಿಲುಕುತ್ತಿದ್ದಾರೆ. ಒಂದೆಡೆ ಸಾಲು ಸಾಲು ಜನರು ಕೊರೊನಾದಿಂದ ಸಾವನ್ನಪ್ಪುತ್ತಿದ್ದಾರೆ. ಇನ್ನೊಂದೆಡೆ ಕೆಲವರ ಅವಿವೇಕತನದಿಂದಾಗಿ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಬರುತ್ತಿದೆ.
ಕೊರೊನಾ ಓಡಿಸಲು ತಟ್ಟೆ ಲೋಟ ಬಡಿದು ವಿಕೃತಿ ಮೆರೆದದ್ದನ್ನೂ ನೋಡಿಯಾಯಿತು. ಕೊರೊನ ಕಡಿಮೆಯಾಗುತ್ತದೆ ಎಂದು ದನದ ಮೂತ್ರ ಕುಡಿದು, ದನದ ಮಲವನ್ನು ಮೈ ಮೇಲೆ ಲೇಪಿಸಿಕೊಂಡಿದ್ದೂ ಆಗಿದೆ. ಗೋ ಕೊರೊನಾ ಗೋ ಎನ್ನುವ ಘೋಷಣೆ ಹಾಕಿಯೂ ಆಗಿದೆ. ಇಷ್ಟೆಲ್ಲ ಮಾಡಿ ಕೊರೊನಾ ಹೋಗಿದ್ದರೆ ಪರವಾಗಿಲ್ಲ, ಮತ್ತೆ ಎರಡನೇ ಅಲೆ ಬಂದು ಜನರ ಪ್ರಾಣವನ್ನು ಹೀರುತ್ತಿದೆ. ಈ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಕೊರೊನಾ ತಡೆಯಲು ಮನೆಯಲ್ಲಿಯೇ ಇರಿ ಎಂದು ಸರ್ಕಾರ ಹೇಳಿದರೆ, ಇಲ್ಲೊಬ್ಬ, ಕೊರೊನಾವನ್ನು ಓಡಿಸುತ್ತೇನೆ ಎಂದು ಮಂತ್ರ ಜಪಿಸುತ್ತಾ, ಹೋಮಾ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆತನ ಎದುರು ಕೆಲವು ಅಮಾಯಕರು ಭಯ ಭಕ್ತಿಗಳಿಂದ ಕುಳಿತುಕೊಂಡಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
“ಓಂ ಕೊರೊನಾ ಭಾಗ್ ಸ್ವಾಹ” ಎಂದು ಮಂತ್ರವಾದಿಯೊಬ್ಬ ಕಿರುಚುತ್ತಾಹೋಮಾ ಮಾಡುತ್ತಿದ್ದಾನೆ. ದೇಶದಲ್ಲಿ ಇಷ್ಟೊಂದು ಪ್ರಾಣ ಹಾನಿಯಾಗಿದೆ. ಎಷ್ಟೆಲ್ಲ ಪೂಜೆ ಮಾಡಿದರೂ ಕೊರೊನಾ ನಿಯಂತ್ರಿಸಲು ಯಾವ ಮಂತ್ರವಾದಿಯಿಂದಲೂ, ಅರ್ಚಕನಿಂದಲೂ ಸಾಧ್ಯವಿಲ್ಲ ಎನ್ನುವುದು ಜನರಿಗೆ ಗೊತ್ತಿದ್ದರೂ ಮತ್ತೆ ಮತ್ತೆ ಮಂತ್ರವಾದಿಗಳ ಹಿಂದೆ ಹೋಗುತ್ತಿದ್ದಾರೆ. ಸತ್ತರೂ ಬುದ್ಧಿ ಬರಲ್ಲ ಎನ್ನುವುದು ಬಹುಶಃ ಇಂತಹವರಿಗೇ ಇರಬಹುದೋ ಏನೂ….!