ರಾಜ್ಯಾದ್ಯಂತ ಇಂದು ಒಂದೇ ದಿನ 8 ಲಕ್ಷ ಮಂದಿಗೆ ಲಸಿಕಾಕರಣ ಗುರಿ : ಸಚಿವ ಡಾ.ಕೆ.ಸುಧಾಕರ್
-
ಲಸಿಕಾ ಮೇಳ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ
ಚಿಕ್ಕಬಳ್ಳಾಪುರ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಇಡೀ ದೇಶವ್ಯಾಪಿ ಲಸಿಕಾ ಮೇಳವನ್ನು ಮಾಡುತ್ತಿದ್ದು, ರಾಜ್ಯದಲ್ಲಿ ಇಂದು ಒಂದೇ ದಿನ 5 ರಿಂದ 8 ಲಕ್ಷ ಮಂದಿಗೆ ಲಸಿಕಾಕರಣ ಮಾಡಲು ಗುರಿ ಹಾಕಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮತ್ತು ತಾಲೂಕಿನ ಪರೇಸಂದ್ರ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರೇತರ ಸಂಸ್ಥೆಯಾದ ಯುನೈಟೆಡ್ ವೇ ಇವರ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಲಸಿಕಾ ಮೇಳ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಇವತ್ತು ಒಂದೇ ದಿನ 30-35 ಸಾವಿರ ಮಂದಿಗೆ ಲಸಿಕಾಕರಣ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ ಎನ್ ಜಿ ಒ ಸಂಸ್ಥೆಯಾದ ಯುನೈಟೆಡ್ ವೇ ಅವರು ಸಹಕಾರ ನೀಡುತ್ತಿದ್ದು, ಈ ಸಂಸ್ಥೆಯಿಂದ ಈಗಾಗಲೇ ಜಿಲ್ಲೆಯ 1000 ಮಂದಿಗೆ ಉಚಿತವಾಗಿ ಲಸಿಕಾಕರಣ ಮಾಡಲಾಗಿದೆ. ಇಂದು ಕೂಡ ಸ್ಪರ್ಶ್ ಆಸ್ಪತ್ರೆಯವರ ಸಹಯೋಗದಲ್ಲಿ 1500 ಮಂದಿಗೆ ಲಸಿಕೆ ಹಾಕಲಾಗುತ್ತಿದೆ. ಇದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 35000 ಮಂದಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ ಎಂದರು.
ರಾಜ್ಯಾದ್ಯಂತ ಲಸಿಕಾಕರಣದ ಮೊದಲನೇ ದಿನವಾದ ಸೋಮವಾರ ಮಧ್ಯಾಹ್ನದ ವೇಳೆಗೆ ಸುಮಾರು 3.50 ಲಕ್ಷ ಜನರಿಗೆ ಲಸಿಕಾಕರಣ ಆಗಿದ್ದು, ಸಂಜೆಯೊಳಗೆ ನಿಗಧಿತ ಗುರಿ ಸಾಧಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಜನರೂ ಕೂಡ ಮುಂದೆ ಬಂದು ಲಸಿಕೆ ಪಡೆದು ಕೊರೊನಾವನ್ನು ಜಯಿಸಬೇಕೆಂಬುದು ಸರ್ಕಾರದ ನಿಲುವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ. ಇದೊಂದು ಐತಿಹಾಸಿಕ ನಿರ್ಣಯವಾಗಿದೆ. ಸಾಮಾನ್ಯವಾಗಿ ಲಸಿಕೆಗಳನ್ನು ಖರೀದಿಸುವುದು, ಜನತೆಗೆ ನೀಡುವುದು ಆಯಾ ರಾಜ್ಯ ಸರ್ಕಾರಗಳ ವಿಷಯವಾಗಿದೆ. ಆದರೆ, ಪ್ರಧಾನಿ ಮೋದಿ ಅವರು ಮೊಟ್ಟ ಮೊದಲ ಬಾರಿಗೆ ಎಲ್ಲಾ ರಾಜ್ಯಗಳಿಗೂ ಉಚಿತವಾಗಿ ಲಸಿಕೆ ನೀಡುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದ್ದು, ರಾಜ್ಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದರಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ತಾಲೂಕು ವೈದ್ಯಾಧಿಕಾರಿ ಡಾ.ಮಂಜುಳಾ, ಪೌರಾಯುಕ್ತರಾದ ಲೋಹಿತ್ ಮತ್ತು ನಗರಸಭೆ ಸದಸ್ಯರು ಸೇರಿದಂತೆ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.