ಸತ್ಸಂಗ ಸೇವೆ ನೆಪದಲ್ಲಿ ದೇವಮಾನವನಿಂದ ಒಂದೇ ಕುಟುಂಬದ ನಾಲ್ವರು ಮಹಿಳೆಯರ ಅತ್ಯಾಚಾರ
ಜೈಪುರ: ದೇವಮಾನವನೋರ್ವ ಆಶ್ರಮದ ನಾಲ್ವರು ಭಕ್ತೆಯರನ್ನು ಅತ್ಯಾಚಾರ ನಡೆಸಿರುವ ಘಟನೆ ಜೈಪುರದಲ್ಲಿ ನಡೆದಿದ್ದು, ಆಶ್ರಮಕ್ಕೆ ಸತ್ಸಂಗ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುತ್ತಿದ್ದ ಮಹಿಳೆಯರನ್ನು ಲೈಂಗಿಕವಾಗಿ ಈತ ಬಳಸಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.
ಜೈಪುರದ ತಪಸ್ವಿ ಆಶ್ರಮದ ಶೈಲೇಂದ್ರ ಮೆಹತಾ ಎಂಬಾತನ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಸಂತ್ರಸ್ತ ನಾಲ್ವರು ಮಹಿಳೆಯರು ಕೂಡ ಒಂದೇ ಕುಟುಂಬದವರಾಗಿದ್ದು, ಕಳೆದ ಕೆಲವು ದಿನಗಳಿಂದ ಆಶ್ರಮದಲ್ಲಿ ತಂಗುತ್ತಿದ್ದರು ಎಂದು ತಿಳಿದು ಬಂದಿದೆ.
ಸತ್ಸಂಗಗಳೆಂಬ ಆಚರಣೆಗಳಿಗೆ ಬಂದ ಮಹಿಳೆಯರ ಸಂಗ ಮಾಡುತ್ತಿದ್ದ ದೇವಮಾನವ, ತನ್ನ ದೇವತಾ ಬುದ್ಧಿ ತೋರಿಸಿದ್ದು, ಆಶ್ರಮದಲ್ಲಿ ತಂಗಿದ್ದ ಮಹಿಳೆಯರ ಮೇಲೆ ದೇವರ ಹೆಸರಿನಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಇನ್ನೂ ಸೇವೆ ಮಾಡುವ ನೆಪದಲ್ಲಿ ತನ್ನ ಬಳಿಗೆ ಕರೆಸಿಕೊಳ್ಳುತ್ತಿದ್ದ ದೇವ ಮಾನವ ಮಹಿಳೆಯರ ಮೇಲೆ ಸಮಯ ನೋಡಿ ಅತ್ಯಾಚಾರ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಇನ್ನೂ ಅತ್ಯಾಚಾರ ಆರೋಪಿ ದೇವಮಾನವ ಶೈಲೇಂದ್ರ ಮೆಹತಾ ವಿರುದ್ಧ ಮಹಿಳೆಯರು ಅತ್ಯಾಚಾರದ ಆರೋಪದಲ್ಲಿ ದೂರು ದಾಖಲಿಸಿದ್ದಾರೆ ಎಂದು ಭಂಕರೋಟಾ ಪೊಲೀಸ್ ಠಾಣೆ ಅಧಿಕಾರಿ ಮುಖೇಶ್ ಚೌಧರಿ ತಿಳಿಸಿದ್ದಾರೆ.
ದೇಶದಲ್ಲಿ ಅಸಾರಾಮ್ ಬಾಪು, ಸ್ವಾಮಿ ನಿತ್ಯಾನಂದ ಮೊದಲಾದ ದೇವಮಾನವರ ವಿರುದ್ಧ ಇಂತಹದ್ದೇ ಪ್ರಕರಣಗಳು ದಾಖಲಾಗಿದ್ದರೂ, ದೇವರ ಹೆಸರಿನಲ್ಲಿ ಅತ್ಯಾಚಾರ ನಡೆಯುತ್ತಲೇ ಇದೆ. ಆದರೂ ಜನರು ದೇವಮಾನವರ ಬಳಿಗೆ ತಾವೇ ಹೋಗಿ ಬಲಿಯಾಗುತ್ತಿದ್ದಾರೆ. ಜನರು ಸುಶಿಕ್ಷಿತರಾಗುವವರೆಗೆ ಇಂತಹ ಘಟನೆಗಳಿಗೆ ಕಡಿವಾಣ ಅಸಾಧ್ಯ.