ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು
ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಅಲೀಪುರ ಗ್ರಾಮದ ಅನಿತಾ (30), ಆಕೆಯ ಪತಿ ಹರೀಶ್(35) ಹಾಗೂ ಪುತ್ರಿ ತೇಜು (6) ಎಂದು ಗುರುತಿಸಲಾಗಿದೆ. ಅನಿತಾ, ತೇಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹರೀಶ್ ಮೃತಪಟ್ಟಿದ್ದಾನೆ. ಮೃತ ದಂಪತಿಯ ಮಗ ಜಾನು(6) ಮತ್ತು ಹರೀಶನ ಸಹೋದರ ರಮೇಶ್(25) ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಾಲೂಕಿನ ಅಲೀಪುರದ ಹರೀಶ್, ಆತನ ಹೆಂಡತಿ ಅನಿತಾ ಹಾಗೂ ಸಹೋದರ ರಮೇಶ ಬೆಳಗ್ಗೆ ಹತ್ತು ಗಂಟೆಗೆ ತೊಂಡೇಭಾವಿಯ ಚರ್ಚ್ಗೆ ಬಂದು ಪ್ರಾರ್ಥನೆ ಮಾಡಿ ನಂತರ ತನ್ನ ಸಹೋದರಿಯ ಮನೆಗೆ ಹೋಗಿ ಅಲ್ಲಿಂದ ತಮ್ಮ ಊರಿಗೆ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ಎದುರಿನಿಂದ ಬಂದ್ ಖಾಸಗಿ ಬಸ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್ ಭೇಟಿ ನೀಡಿ, ಬಸ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.