ಒಂದೇ ಕುಟುಂಬದ 9 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್!
06/03/2021
ನವದೆಹಲಿ: ಬಿಹಾರದ ಗೋಪಾಲ್ ಗಂಜ್ ನಲ್ಲಿ 2016ರಲ್ಲಿ ನಡೆದಿದ್ದ ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ವಿಶೇಷ ಅಬಕಾರಿ ನ್ಯಾಯಾಲಯ ಒಂದೇ ಕುಟುಂಬದ 9 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.
2016ರ ಆಗಸ್ಟ್ ನ ಗೋಪಾಲ್ ಗಂಜ್ ಜಿಲ್ಲೆಯ ಖರ್ಜುರಬಾನಿ ಪ್ರದೇಶದಲ್ಲಿ ವಿಷಪೂರಿತ ಮದ್ಯ ಸೇವಿಸಿ 19 ಜನರು ಸಾವನ್ನಪ್ಪಿ, ಇಬ್ಬರು ತಮ್ಮ ದೃಷ್ಟಿ ಕಳೆದುಕೊಂಡಿದ್ದರು. ಬಿಹಾರದಲ್ಲಿ 2016ರಲ್ಲಿ ನಿತೀಶ್ ಕುಮಾರ್ ಸರ್ಕಾರ ಮದ್ಯಪಾನ ನಿಷೇಧ ಮಾಡಿದ ವೇಳೆ ಈ ಕಳ್ಳಭಟ್ಟಿ ದುರಂತ ನಡೆದಿತ್ತು.
ಈ ಪ್ರಕರಣದ ಒಟ್ಟು 13 ಮಂದಿಯನ್ನು ಕೋರ್ಟ್ ದೋಷಿಗಳು ಎಂದು ಪರಿಗಣಿಸಿದ್ದು, ಒಂದೇ ಕುಟುಂಬದ 9 ಮಂದಿಗೆ ಮರಣದಂಡನೆ ವಿಧಿಸಿದ್ದು, ಉಳಿದ ನಾಲ್ವರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆಧಾರದಲ್ಲಿ 21 ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದೊಂದು ಅತ್ಯಂತ ಅಮಾನವೀಯ ಪ್ರಕರಣವಾಗಿತ್ತು. ಬಿಹಾರದಲ್ಲಿ ಮೊದಲ ಬಾರಿಗೆ ಇಂತಹದ್ದೊಂದು ತೀರ್ಪು ಹೊರ ಬಿದ್ದಿದೆ.