ಒಂದೇ ಶ್ವಾಸಕೋಶವಿದ್ದರೂ ಕೊರೊನಾ ಗೆದ್ದ ನರ್ಸ್
14/05/2021
ಭೋಪಾಲ್: ಒಂದೇ ಶ್ವಾಸಕೋಶವನ್ನು ಹೊಂದಿರುವ ನರ್ಸ್ ವೊಬ್ಬರು ಕೊರೊನಾವನ್ನು ಗೆದ್ದ ಘಟನೆ ನಡೆದಿದ್ದು, ತನ್ನ ಆತ್ಮವಿಶ್ವಾಸದಿಂದಲೇ ತಾನು ಕೊರೊನಾವನ್ನು ಗೆದ್ದೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ 39 ವರ್ಷದ ನರ್ಸ್ 14 ದಿನಗಳಲ್ಲಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ತಮ್ಮ ಬಾಲ್ಯದಲ್ಲಿಯೇ ಒಂದು ಶ್ವಾಸಕೋಶವನ್ನು ನರ್ಸ್ ಕಳೆದುಕೊಂಡಿದ್ದರು. ಟಿಕಮ್ ಗರ್ ಆಸ್ಪತ್ರೆಯ ಸಿಒವಿಐಡಿ ವಾರ್ಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 14 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು.
ಕೊರೊನಾ ಶ್ವಾಸಕೋಶಕ್ಕೆ ಹಾನಿ ಮಾಡಿ ಮನುಷ್ಯನನ್ನು ಕೊಲ್ಲುತ್ತಿದೆ. ಈ ಹಿನ್ನೆಲೆಯಲ್ಲಿ ಈ ನರ್ಸ್ ಗೆ ಒಂದೇ ಶ್ವಾಸಕೋಶ ಇದೆ ಹಾಗಾಗಿ ಇವರಿಗೆ ಚಿಕಿತ್ಸೆ ಫಲಿಸುವುದು ಬಹಳ ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೆ 14 ದಿನಗಳಲ್ಲಿಯೇ ಅವರು ಗುಣಮುಖರಾಗುವ ಮೂಲಕ ಕೊರೊನಾಕ್ಕೆ ಸೆಡ್ಡು ಹೊಡೆದಿದ್ದಾರೆ.