ಒಂದು ದೇಹದಲ್ಲಿ ಎರಡು ಜೀವ | ಸರ್ಕಾರ ಮತ್ತು ಕಾನೂನಿಗೆ ಸವಾಲಾದ ಸಹೋದರರು
ಪಂಜಾಬ್: ಒಂದು ದೇಹ ಎರಡು ಜೀವಗಳನ್ನು ಹೊಂದಿರುವ ಸಹೋದರರು ಇದೀಗ ಸರ್ಕಾರಕ್ಕೆ ಸವಾಲಾಗಿದ್ದು, ಇವರ ಸ್ಟೋರಿ ಇದೀಗ ಪಂಜಾಬ್ ನಲ್ಲಿ ಹಾಟ್ ಟಾಪಿಕ್ ಆಗಿದ್ದು, ಇವರಿಗೆ ಅಂಗವೈಕಲ್ಯ ಪ್ರಮಾಣ ಪತ್ರದಿಂದ ಹಿಡಿದು ಯಾವುದೇ ಪ್ರಮಾಣ ಪತ್ರವನ್ನು ನೀಡಬೇಕಾದರೂ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಇದೀಗ ಈ ಸಹೋದರರು ಬೆಳೆದು ನಿಂತಿದ್ದು, 18 ವರ್ಷ ವಯಸ್ಸು ತುಂಬಿದ ಹಿನ್ನೆಲೆಯಲ್ಲಿ ಉದ್ಯೋಗಕ್ಕೆ ಅರ್ಜಿಸಲ್ಲಿಸಿದ್ದಾರೆ. ಇವರಿಗೆ ಯಾವ ರೀತಿಯಲ್ಲಿ ಉದ್ಯೋಗವನ್ನು ನೀಡುವುದು ಎಂದು ಸರ್ಕಾರ ಯೋಚಿಸಲು ಆರಂಭಿಸಿದೆ.
ಸೋಹನ ಹಾಗೂ ಮೋಹನ ಸಹೋದರರು ಇದೀಗ ಸರ್ಕಾರಕ್ಕೆ ಸವಾಲಾಗಿರುವವರಾಗಿದ್ದಾರೆ. ಇವರು ಇಬ್ಬರು ವ್ಯಕ್ತಿಗಳಾದರೂ ಇವರ ದೇಹ ಒಂದೇ ಆಗಿದೆ. ಪರಸ್ಪರ ಅಂಟಿಕೊಂಡು ಜನನವಾಗಿರುವ ಶಿಶುಗಳು ಇದೀಗ ಬೆಳೆದು ನಿಂತಿದ್ದಾರೆ. ಒಬ್ಬನ ಸೋಂಟದ ಭಾಗದಿಂದ ಇನ್ನೋರ್ವನ ದೇಹ ಇರುವ ಸ್ಥಿತಿಯಲ್ಲಿ ಇವರಿಬ್ಬರಿದ್ದಾರೆ. ಎರಡು ಮುಖಗಳು, ಎರಡು ಶ್ವಾಸಕೋಶಗಳು, ಎರಡು ಹೃದಯ, ಎರಡು ಬೆನ್ನುಮೂಳೆಯನ್ನು ಇವರು ಪ್ರತ್ಯೇಕವಾಗಿ ಹೊಂದಿದ್ದಾರೆ. ಆದರೆ, ಮೂತ್ರ ಪಿಂಡ, ಪಿತ್ತಜನಕಾಂಗ ಮತ್ತು ಮೂತ್ರಕೋಶ ಇಬ್ಬರಿಗೂ ಒಂದೇ ಆಗಿದೆ. ಇಬ್ಬರಿಗೆ ನಾಲ್ಕು ಕೈಗಳಿವೆ. ಆದರೆ, ಇಬ್ಬರಿಗೂ ಎರಡು ಕಾಲುಗಳು ಮಾತ್ರ ಇವೆ. ಪ್ರಕೃತಿಯ ಆಟದಿಂದಾಗಿ ಇದೀಗ ಇಬ್ಬರು ಯುವಕರು ಒಂದೇ ದೇಹದಲ್ಲಿ ವಾಸಿಸುತ್ತಿದ್ದಾರೆ.
ಒಂದೇ ದೇಹದಲ್ಲಿ ಇಬ್ಬರು ಇರುವುದರಿಂದಾಗಿ ಇವರಿಗೆ ಅಂಗವೈಕಲ್ಯ ಪ್ರಮಾಣ ಪತ್ರವನ್ನು ನೀಡಲು ಕೂಡ, ಸರ್ಕಾರ ಸ್ಥಾಪಿಸಿರುವ ವೈದ್ಯಕೀಯ ಮಂಡಳಿಯೂ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಇವರಿಗೆ ಎರಡು ಪ್ರಮಾಣ ಪತ್ರವನ್ನು ನೀಡಬೇಕೋ ಒಂದೇ ಪ್ರಮಾಣ ನೀಡಬೇಕೋ ಎನ್ನುವುದು ಸದ್ಯದ ಗೊಂದಲವಾಗಿದೆ. ಪ್ರಸ್ತುತ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನ ತೀರ್ಪನ್ನು ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಬೇರೆ ರಾಜ್ಯದಲ್ಲಿ ಇಂತಹ ಪ್ರಕರಣಗಳಲ್ಲಿ ಯಾವ ರೀತಿಯಾಗಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎನ್ನುವ ವಿಚಾರವನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಸೋಹನ ಮತ್ತು ಮೋಹನಗೆ ಎರಡು ಸರ್ಕಾರಿ ದಾಖಲೆಗಳಿವೆ. ಇಬ್ಬರ ಆಧಾರ್ ಕಾರ್ಡ್ ಗಳು ಕೂಡ ಬೇರೆಬೇರೆಯೇ ಆಗಿದೆ. ಜೂನ್ 14ರಂದು ಇವರಿಬ್ಬರಿಗೆ 18 ವರ್ಷ ತುಂಬಿದೆ. ಇದೀಗ ಅವರು ವೋಟರ್ ಐಡಿಗೆ ಕೂಡ ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನೂ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಮೂರು ವರ್ಷದ ಡಿಪ್ಲೊಮಾ ಹೊಂದಿರುವ ಸೋಹನ್ ಮೋಹನ್ ಪಂಜಾಬ್ ವಿದ್ಯುತ್ ಮಂಡಳಿ ಕಂಪೆನಿ ಪವರ್ ಕಾಮ್ ನಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ಇವರನ್ನು ಕೆಲಸಕ್ಕೆ ಹೇಗೆ ಆಯ್ಕೆ ಮಾಡುವುದು ಎನ್ನುವುದು ಕೂಡ ಕಂಪೆನಿಗೆ ಗೊಂದಲವಾಗಿದೆ. ಇವರಲ್ಲಿ ಒಬ್ಬರಿಗೆ ಉದ್ಯೋಗವನ್ನು ನೀಡಿದರೂ, ಇಬ್ಬರೂ ಕೆಲಸಕ್ಕೆ ಬರಬೇಕಾಗುತ್ತದೆ. ಒಂದು ವೇಳೆ ಇಬ್ಬರನ್ನು ನೇಮಕ ಮಾಡಿಕೊಂಡರೆ, ಒಂದು ಸಮಯದಲ್ಲಿ ಒಬ್ಬರು ಮಾತ್ರವೇ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇವರನ್ನು ಹುದ್ದೆಗೆ ನೇಮಕ ಮಾಡಬೇಕಾದರೆ, ಇಬ್ಬರಿಗೂ ಪ್ರತ್ಯೇಕ ವೇತನ ನೀಡಬೇಕಾಗುತ್ತದೆ. ಒಂದು ವೇಳೆ ಬೇರೆ ಬೇರೆ ಪ್ರದೇಶದಲ್ಲಿ ಇಬ್ಬರಿಂದ ಕೆಲಸ ಮಾಡಿಸಬೇಕಾದರೆ, ಇವರು ಒಂದು ಸ್ಥಳದಲ್ಲಿ ಮಾತ್ರವೇ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಇದೀಗ ಯಾವ ಪರಿಹಾರವನ್ನು ಹುಡುಕಬೇಕು ಎನ್ನುವುದು ತೋಚದೇ ಇದೀಗ ವಿದ್ಯುತ್ ಮಂಡಳಿ ಕೂಡ ಉತ್ತರಗಳನ್ನು ಹುಡುಕುತ್ತಿದೆ.
ಇನ್ನೂ ಇವರಿಬ್ಬರು ಕೂಡ ಆರೋಗ್ಯವಂತರಾಗಿದ್ದು, ದೈಹಿಕವಾಗಿಯೂ ಬಲಶಾಲಿಗಳಾಗಿದ್ದಾರೆ. ಏಣಿಗಳನ್ನು ಏರಲು ಶಕ್ತರಾಗಿದ್ದಾರೆ. ಡಿಪ್ಲೊಮಾದಲ್ಲಿ ಕೂಡ ಉತ್ತಮ ಅಂಕಗಳನ್ನು ಇವರು ಗಳಿಸಿದ್ದಾರೆ. ಜಲಂಧರ್ ನಲ್ಲಿರುವ ಸಂಸ್ಥೆಯಲ್ಲಿ ಪ್ರಸ್ತುತ ಇವರಿಬ್ಬರೂ ಎಲೆಕ್ಟ್ರಿಕಲ್ ಕೆಲಸದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಭಾರತದ ಕಾನೂನಿನ ಪ್ರಕಾರ ಎರಡು ಕೈ, ಎರಡು ಕಾಲು ಹೀಗಿ ಎರಡು ಅಂಗಗಳನ್ನು ಹೊಂದಿರುವ ವ್ಯಕ್ತಿಗೆ ಅಂಗವೈಕಲ್ಯದ ಸರ್ಟಿಫಿಕೇಟ್ ನೀಡುವುದಿಲ್ಲ. ಆದರೆ, ಈ ವಿಶೇಷ ಜನನಕ್ಕೆ ಯಾವ ಸರ್ಟಿಫಿಕೆಟ್ ನೀಡಬೇಕು ಎನ್ನುವುದು ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿಯೇ ಉಳಿದಿದೆ. ಈ ಸಮಸ್ಯೆ ಪರಿಹಾರಕ್ಕೆ ಏನೆಲ್ಲ ಮಾರ್ಗಗಳಿವೆ, ಈ ಸವಾಲನ್ನು ಹೇಗೆ ಪರಿಹರಿಸಬಹುದು ಎಂಬ ಬಗ್ಗೆ ತಜ್ಞರು ಯೋಚಿಸುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು…
200 ರೂಪಾಯಿ ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರಾರಿಯಾದ ಬೈಕ್ ಸವಾರರು!
ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಡೇಟ್ ಫಿಕ್ಸ್: ಬೆಂಗಳೂರಿನ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೆ ಎನ್.ಮಹೇಶ್ ಸಿದ್ಧತೆ
“ಕಸವು ಕಸದ ಬುಟ್ಟಿಗೆ ಸೇರಿತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆ ಹಿನ್ನೆಲೆ ಪರ-ವಿರೋಧ ಚರ್ಚೆ!
ನಟಿ ಶಕೀಲ ಸಾವಿನ ಸುಳ್ಳು ಸುದ್ದಿ ಹರಡಿದ ಯುವಕನಿಗೆ ಅವರು ಹೇಳಿದ್ದೇನು ಗೊತ್ತಾ?
ಅನಾಥ ಹುಡುಗಿಯನ್ನು ಮಗಳಂತೆ ಸಾಕಿ, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟ ಮುಸ್ಲಿಮ್ ಕುಟುಂಬ
ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ