ಯೋಗ ಮಾಡಿದರೆ ರೋಗ ಬರಲ್ಲ, ಇದು ನನ್ನ ವೈಯುಕ್ತಿಕ ಅನುಭವ: ಜಿಲ್ಲಾಧಿಕಾರಿ
ಚಿಕ್ಕಬಳ್ಳಾಪುರ: 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್(ಆನ್ ಲೈನ್) ಮಾಧ್ಯಮದ ಮೂಲಕ ಸೋಮವಾರ ಬೆಳಗ್ಗೆ ಚಾಲನೆ ನೀಡಿದರು.
ಮಾನ್ಯ ಪ್ರಧಾನಿಗಳ ಚಾಲನೆ ನೀಡಿದ ನಂತರ ‘ *ಯೋಗ ಮಾಡೋಣ, ಕೊರೊನಾ ಗೆಲ್ಲೋಣ ‘ ಎಂಬ ಧ್ಯೇಯವಾಕ್ಯದೊಂದಿಗೆ ಸ್ಥಳೀಯ ಜಿಲ್ಲಾಡಳಿತದ ವತಿಯಿಂದ ಶ್ರೀ ಪಥಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ನಲ್ಲಿ ಆಯೋಜಿಸಿದ್ದ ಈ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ತಬೀಬಾ ಬಾನು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುಮಾರು 45 ನಿಮಿಷಗಳ ಕಾಲ ಯೋಗಾಸನ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಆರ್.ಲತಾ ಅವರು, ಯೋಗ ಮಾಡಿದರೆ ರೋಗ ಬರಲ್ಲ. ಇದು ನನ್ನ ವೈಯುಕ್ತಿಕ ಅನುಭವ ಕೂಡ ಆಗಿದೆ. ನಾನು ಸುಮಾರು 5 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, ಯಾರು ಮಾಡುತ್ತಿಲ್ಲವೂ ಅವರು ತಮ್ಮ ಜೀವನದಲ್ಲಿ ಪ್ರತಿ ನಿತ್ಯ ಯೋಗಾಭ್ಯಾಸ ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ಯೋಗದಿಂದ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಆರೋಗ್ಯ ಸದೃಢವಾಗಲಿದ್ದು, ಆರೋಗ್ಯವೂ ಕೂಡ ಸುಧಾರಣೆಯಾಗಲಿದೆ. ಅಲ್ಲದೆ ನಮ್ಮ ದೇಹದಲ್ಲಿನ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟಲು ಮತ್ತು ಬಂದ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಯೋಗದ ಸರಿಯಾದ ಅಭ್ಯಾಸದಿಂದ ಮಾತ್ರ ಸಾಧ್ಯ.
ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಹಲವು ರೀತಿಯ ಉಸಿರಾಟದ ತೊಂದರೆಗಳು, ವಿವಿಧ ರೀತಿಯ ತಲೆನೋವು, ವಿಧ ವಿಧದ ಜೀರ್ಣಾಂಗ ಸಂಬಂಧಿ ತೊಂದರೆಗಳು, ನಿದ್ರಾಹೀನತೆ ಇತ್ಯಾದಿಗಳೆಲ್ಲ ಹೆಚ್ಚಿನ ಸಂದರ್ಭಗಳಲ್ಲಿ ಮನೋದೈಹಿಕ ರೋಗಗಳೇ ಆಗಿದ್ದು, ಉಸಿರಾಟದೊಂದಿಗೆ ಮಾಡುವ ಯೋಗದ ಅಭ್ಯಾಸ ಕ್ರಮದಿಂದ ಮನಸ್ಸಿನ ನಿಯಂತ್ರಣ ಸಾಧಿಸುವುದರೊಂದಿಗೆ ರೋಗಗಳ ಮೂಲ ಕಾರಣಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.
ಯೋಗದ ಕ್ರಮಬದ್ಧವಾದ ಅಭ್ಯಾಸದಿಂದ ದೇಹ ಮತ್ತು ಮನಸ್ಸನ್ನು ಶುದ್ಧಿ ಮಾಡಿ ಮನೋದೈಹಿಕ ರೋಗಗಳನ್ನು ಹೋಗಲಾಡಿಸಬಹುದು. ಇಂದು ವಿಶ್ವಕ್ಕೆ ಕಂಟಕವಾ ಗಿರುವ ಕೋವಿಡ್-19 ಬರದಂತೆ ತಡೆಗ ಟ್ಟಲು ಬೇಕಾದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಲು ಮತ್ತು ಕೊರೊನಾ ಬಂದ ವ್ಯಕ್ತಿಗೆ ಬೇಕಾದ ಮಾನಸಿಕ ಸ್ಥೈರ್ಯವನ್ನು ಒದಗಿಸಲು ಹಾಗೂ ಉಸಿರಾಟದ ತೊಂದರೆಗಳೇ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಯೋಗದಿಂದ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ರೇಣುಕಾ, ಪೌರಾಯುಕ್ತ ರೋಹಿತ್ ಕುಮಾರ್, ಯೋಗ ಗುರು ಗೋವಿಂದ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಎಂ.ವೆಂಕಟೇಶ್ ಶಿಡ್ಲಘಟ್ಟ