ನಮಗೆ ಎದುರಾಳಿಗಳ ಸಮಸ್ಯೆಯಲ್ಲ, ಅದೊಂದು ಪ್ರಶ್ನೆಯೇ ಅಲ್ಲ: ಪುತ್ತಿಲ ಸ್ಪರ್ಧೆ ವಿಚಾರಕ್ಕೆ ನಳಿನ್ ಕುಮಾರ್ ಪ್ರತಿಕ್ರಿಯೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸುವುದು ಖಚಿತವಾಗಿದೆ. ಈ ಬಗ್ಗೆ ಹಾಲಿ ಸಂಸದ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಪುತ್ತಿಲ ಪರಿವಾರ ಅದೊಂದು ಸ್ವತಂತ್ರವಾಗಿರುವ ಸಂಘಟನೆ. ಅವರು ತಮ್ಮ ಅಭಿಪ್ರಾಯ, ತೀರ್ಮಾನಗಳನ್ನು ತೆಗೆದುಕೊಳ್ಳಲು ಸ್ವತಂತ್ರವಿದ್ದಾರೆ. ಪಾರ್ಟಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.
ಭಾರತೀಯ ಜನತಾ ಪಾರ್ಟಿ ಬಹಳ ವರ್ಷಗಳ ಹೋರಾಟದ ಪರಿಣಾಮವಾಗಿ ಇವತ್ತು ದೇಶದ ಅತಿದೊಡ್ಡ ಪಾರ್ಟಿಯಾಗಿ ಬೆಳೆದಿದೆ. ರಾಷ್ಟ್ರೀಯ ಪಾರ್ಟಿ ಕಾಂಗ್ರೆಸ್ ನ್ನು ಎದುರಿಸಿ ಅತೀ ಹೆಚ್ಚುಲೋಕಸಭಾ ಸದಸ್ಯರನ್ನ, ಅತೀ ಹೆಚ್ಚು ಶಾಸಕರನ್ನ, ಅತೀ ಹೆಚ್ಚು ತಾಲೂಕು ಪಂಚಾಯತ್ ಸದಸ್ಯರನ್ನ ಪಡೆದುಕೊಂಡಿದೆ. ಚುನಾವಣೆಯಲ್ಲಿ ಸಹಜವಾಗಿ ನಮಗೆ ಎದುರಾಳಿಗಳು ಸಮಸ್ಯೆಯಲ್ಲ, ನಮಗೆ ಅದೊಂದು ಪ್ರಶ್ನೆಯೇ ಅಲ್ಲ ಎಂದರು.
ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಇದೊಂದು ಪ್ರಜಾಪ್ರಭುತ್ವದ ವ್ಯವಸ್ಥೆ, ಇದರಲ್ಲಿ ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ ಎಂದರು.
ಹತ್ತಾರು ಸಂದರ್ಭಗಳಲ್ಲಿ ಈ ರೀತಿಯ ಸಮಸ್ಯೆಗಳು ಉದ್ಬವವಾಗುತ್ತದೆ. ಒಂದೊಂದು ಚುನಾವಣೆಗಳಲ್ಲಿ ಒಂದೊಂದು ರೀತಿಯ ಸವಾಲುಗಳಿರುತ್ತವೆ. ಆ ಎಲ್ಲ ಸವಾಲುಗಳ ಮಧ್ಯೆಯೂ, ಭಾರತೀಯ ಜನತಾ ಪಾರ್ಟಿ ಗೆಲುವನ್ನು ಸಾಧಿಸುತ್ತಾ ಬಂದಿದೆ. ಈ ಬಾರಿಯಂತೂ ಇಡೀ ದೇಶದಲ್ಲಿ ನರೇಂದ್ರ ಮೋದಿ ಅವರ ವಾತಾವರಣ, ರಾಮಮಂದಿರದ ನಂತರ ಭಾರತೀಯ ಜನತಾ ಪಾರ್ಟಿಯ ಪರವಾಗಿರುವಂತಹ ವಾತಾವರಣ ದೇಶದ ಹಿತ ದೃಷ್ಟಿಯಿಂದ, ಹಿಂದುತ್ವದ ಹಿತ ದೃಷ್ಟಿಯಿಂದ, ಹಿಂದೂ ಸಮಾಜದ ಹಿತ ದೃಷ್ಟಿಯಿಂದ ಯಾರೆಲ್ಲ ಹಿಂದುತ್ವ ಮಾತನಾಡುತ್ತಾರೋ, ಯಾರೆಲ್ಲ ರಾಷ್ಟ್ರವಾದ ಮಾತನಾಡುತ್ತಾರೋ, ಯಾರೆಲ್ಲ ಭಾರತ ಮಾತರನ್ನು ಆರಾಧನೆ ಮಾಡುತ್ತಾರೋ ಇವರೆಲ್ಲ ಒಟ್ಟಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ವಿಧಾನ ಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಅತೀ ಹೆಚ್ಚಿನ ಮತಗಳನ್ನು ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ವಿಧಾನ ಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth