ನಮ್ಮ ಕ್ಲಿನಿಕ್ : ಬಿಜೆಪಿ ಪರ ಪ್ರಚಾರಕ್ಕಾಗಿ ರೋಗಿಗಳ ಭಾವನೆ ಜೊತೆ ಚೆಲ್ಲಾಟ: ಎಎಪಿ - Mahanayaka
8:02 PM Wednesday 11 - December 2024

ನಮ್ಮ ಕ್ಲಿನಿಕ್ : ಬಿಜೆಪಿ ಪರ ಪ್ರಚಾರಕ್ಕಾಗಿ ರೋಗಿಗಳ ಭಾವನೆ ಜೊತೆ ಚೆಲ್ಲಾಟ: ಎಎಪಿ

aap bengalore
08/02/2023

ಬೆಂಗಳೂರು: ರಾಜ್ಯ ಸರ್ಕಾರ ಆರಂಭಿಸಿರುವ ನಮ್ಮ ಕ್ಲಿನಿಕ್ ‌ಗಳು ಕೇವಲ ಬಿಜೆಪಿಯ ಪ್ರಚಾರ ಕೇಂದ್ರಗಳಾಗಿದ್ದು, ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸದೇ ರೋಗಿಗಳ ಭಾವನೆ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೃಥ್ವಿ ರೆಡ್ಡಿ, “ರಾಜ್ಯ ಬಿಜೆಪಿ ಸರ್ಕಾರವು ಆರಂಭಿಸಿರುವ ನಮ್ಮ ಕ್ಲಿನಿಕ್‌ ಹೇಗಿದೆಯೆಂದು ಪರಿಶೀಲಿಸಲು ಆಮ್‌ ಆದ್ಮಿ ಪಾರ್ಟಿ ತಂಡ ಭೇಟಿ ನೀಡಿತ್ತು. ಆಗ ಅವು ನಮ್ಮ ಕ್ಲಿನಿಕ್‌ ಅಲ್ಲ, ಬದಲಾಗಿ ಬಿಜೆಪಿ ಪ್ರಚಾರ ಕೇಂದ್ರಗಳು ಎಂದು ಅಲ್ಲಿ ಹಾಕಿರುವ ಬಿಜೆಪಿ ನಾಯಕರ ಫೋಟೋಗಳಿರುವ ಬ್ಯಾನರ್‌ ಹಾಗೂ ಅವ್ಯವಸ್ಥೆಗಳನ್ನು ನೋಡಿ ತಿಳಿದುಬಂದಿತು. ದೆಹಲಿ ಎಂಬ ಸಣ್ಣ ನಗರದಲ್ಲಿ ಆಮ್‌ ಆದ್ಮಿ ಪಾರ್ಟಿಯು ಈಗಾಗಲೇ 500 ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದು, ಇನ್ನೂ 500 ಕ್ಲಿನಿಕ್‌ಗಳನ್ನು ತೆರೆಯುವ ಪ್ರಯತ್ನದಲ್ಲಿದೆ. ಆದರೆ ಕರ್ನಾಟಕವೆಂಬ ದೊಡ್ಡ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಒಟ್ಟು 438 ನಮ್ಮ ಕ್ಲಿನಿಕ್‌ಗಳಿಗೆ ಮಾತ್ರ ಯೋಜನೆ ರೂಪಿಸಿದೆ. ಇದರಲ್ಲಿ ಬೆಂಗಳೂರಿನಲ್ಲಿ 243 ಹಾಗೂ ಬೆಂಗಳೂರಿನ ಹೊರಗಿನ ಬೃಹತ್‌ ಪ್ರದೇಶದಲ್ಲಿ ಕೇವಲ 195 ಕ್ಲಿನಿಕ್‌ಗೆ ಯೋಜನೆ ರೂಪಿಸಲಾಗಿದೆ. ಜನರಿಗೆ ಸಮೀಪದಲ್ಲೇ ಕ್ಲಿನಿಕ್‌ ಸಿಗಬೇಕು ಎಂಬ ಉದ್ದೇಶ ಈಡೇರಲು ಇದರಿಂದ ಸಾಧ್ಯವೇ?” ಎಂದು ಪ್ರಶ್ನಿಸಿದರು.

“ಆಮ್‌ ಆದ್ಮಿ ಪಾರ್ಟಿಯು ಬೆಂಗಳೂರಿನ ಶಾಂತಿನಗರದಲ್ಲಿ ಎರಡು ವರ್ಷಗಳಿಂದ ಆಮ್‌ ಆದ್ಮಿ ಕ್ಲಿನಿಕ್‌ ನಡೆಸುತ್ತಿದೆ. ಇದು ಬೆಳಗ್ಗೆ ಮಾತ್ರ ತೆರೆದಿರುತ್ತಿದ್ದು, ತಿಂಗಳಿಗೆ 8ರಿಂದ 10 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಸರ್ಕಾರದ ನಮ್ಮ ಕ್ಲಿನಿಕ್‌ಗಳು ಸಂಜೆಯವರೆಗೂ ತೆರೆದಿರುವುದರಿಂದ ಎರಡು ಪಟ್ಟು ಹೆಚ್ಚು ಖರ್ಚು ಆಗಲಿದೆ. ಆದರೆ ಸರ್ಕಾರವು ಪ್ರತಿ ಕ್ಲಿನಿಕ್‌ಗೆ ಇಡೀ ವರ್ಷಕ್ಕೆ ಕೇವಲ 36 ಲಕ್ಷ ಹಣವನ್ನು ಮಾತ್ರ ಮೀಸಲಿಟ್ಟಿದೆ. ಇದು ಅಲ್ಲಿರುವ ಐದು ಮಂದಿಯ ಸಂಬಳ ಹಾಗೂ ಬಾಡಿಗೆಗೇ ಸಾಕಾಗುವುದಿಲ್ಲ. ಹೀಗಿರುವಾಗ, ಹೇಗೆ ಉಚಿತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ?” ಎಂದು ಪೃಥ್ವಿ ರೆಡ್ಡಿ ಪ್ರಶ್ನಿಸಿದರು.

“ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಮೂರು ಹಂತದ ವೈದ್ಯಕೀಯ ವ್ಯವಸ್ಥೆ ಜಾರಿಯಲ್ಲಿರಬೇಕು. ಉದಾಹರಣೆಗೆ, ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‌, ಪಾಲಿಕ್ಲಿನಿಕ್‌ ಹಾಗೂ ಸುಸಜ್ಜಿತವಾದ ಆಸ್ಪತ್ರೆಗಳಿವೆ. ಮೊಹಲ್ಲಾ ಕ್ಲಿನಿಕ್‌ನಲ್ಲಿ ತಪಾಸಣೆ ನಡೆಸಿದಾಗ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎನಿಸಿದರೆ ಮುಂದಿನ ಹಂತಗಳಿಗೆ ಶಿಫಾರಸು ಮಾಡಿ, ಅಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ʻನಮ್ಮ ಕ್ಲಿನಿಕ್‌ʼ ಕೇಂದ್ರಗಳಲ್ಲಿ ತಪಾಸಣೆ ನಡೆಸಿದಾಗ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎನಿಸಿದರೆ, ಅದನ್ನು ನೀಡಲು ಮುಂದಿನ ಹಂತದ ವ್ಯವಸ್ಥೆಯು ದುಸ್ಥಿತಿಯಲ್ಲಿವೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ನಮ್ಮ ಕ್ಲಿನಿಕ್‌ಗಳಲ್ಲಿ ಟೆಲಿಮೆಡಿಸಿನ್‌ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿಯವರು ಹೇಳಿದ್ದಾರೆ. ಆದರೆ ವೈದ್ಯರು ರೋಗಿಯನ್ನು ನೋಡದೇ ಟೆಲಿಮೆಡಿಸಿನ್‌ ಮಾಡಲು ಹೇಗೆ ಸಾಧ್ಯ? ಮೊಹಲ್ಲಾ ಕ್ಲಿನಿಕ್‌ಗಳನ್ನು ನಕಲು ಮಾಡಲು ಹೋಗಿ ಮೋಸ ಕ್ಲಿನಿಕ್‌ಗಳನ್ನು ರಾಜ್ಯ ಬಿಜೆಪಿ ಸರ್ಕಾರ ತೆರೆಯುತ್ತಿದೆ. ಕೇವಲ ರಾಜಕೀಯ ಕಾರಣಗಳಿಗಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ಕೂಡ ರಾಜ್ಯ ಬಿಜೆಪಿ ಸರ್ಕಾರ ಹಾಳುಗೆಡವಿದೆ. ಈಗ ನಮ್ಮ ಕ್ಲಿನಿಕ್‌ ಹೆಸರಿನಲ್ಲಿ ಜನರಿಗೆ ಮತ್ತೊಂದು ಮೋಸ ಮಾಡಲು ಹೊರಟಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಕ್ಲಿನಿಕ್‌ ಗಳನ್ನು ಹೇಗೆ ನಡೆಸಬೇಕೆಂದು ತಿಳಿಯಲು ರಾಜ್ಯ ಸರ್ಕಾರವು ದೂರದ ದೆಹಲಿಗೆ ಹೋಗುವುದು ಕೂಡ ಬೇಕಾಗಿಲ್ಲ. ಬೆಂಗಳೂರಿನ ಶಾಂತಿನಗರದಲ್ಲಿರುವ ಆಮ್‌ ಆದ್ಮಿ ಕ್ಲಿನಿಕ್‌ಗೆ ಬಂದರೆ ನಾವೇ ತೋರಿಸುತ್ತೇವೆ. ಈಗ ತೆರೆದಿರುವ ನಮ್ಮ ಕ್ಲಿನಿಕ್‌ಗಳಲ್ಲಿ ಮಂಚದ ಮೇಲೆ ಸರಿಯಾದ ಹಾಸಿಗೆಯಿಲ್ಲ, ಮಾತ್ರೆಗಳ ದಾಸ್ತಾನು ಕೂಡ ಇಲ್ಲ. ಜನರ ಆರೋಗ್ಯದ ವಿಚಾರದಲ್ಲಿ ಈ ರೀತಿ ಮೋಸ ಮಾಡಿ, ಅವರ ಭಾವನೆಗಳ ಜೊತೆ ಚೆಲ್ಲಾಡುವುದು ಸರಿಯಲ್ಲ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಮ್‌ ಆದ್ಮಿ ಪಾರ್ಟಿ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹಾಗೂ ವಕ್ತಾರೆ ಉಷಾ ಮೋಹನ್‌ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ