ನಮ್ಮ ಹಬ್ಬಗಳು, ನಮಗೆಷ್ಟು ಲಾಭ ?
ದಮ್ಮಪ್ರಿಯ ಬೆಂಗಳೂರು
ಕೆಲವು ಹಬ್ಬಗಳು ಈ ನಾಡಿನ/ದೇಶದ ಹೆಮ್ಮೆಯ ಪ್ರತೀಕಗಳು. ಒಡೆದ ಮನಸ್ಸುಗಳನ್ನು, ಕುಟುಂಬಗಳನ್ನು ಒಂದಾಗಿಸುವ ಬಹು ಮುಖ್ಯವಾದ ಕೊಂಡಿಗಳು. ಅದರಲ್ಲಿ ವರಮಹಾಲಕ್ಷ್ಮಿ ಹಬ್ಬವೆನ್ನುವುದು ಈ ಮಣ್ಣಿನ ಹೆಣ್ಣುಮಕ್ಕಳ ಸಂಪ್ರದಾಯ ಮತ್ತು ಸಾಂಸ್ಕೃತಿಕ ಆಚರಣೆಯ ಒಂದು ಚಿಹ್ನೆ, ಅದನ್ನು ನಾವು ಎಂದಿಗೂ ಮರೆಯುವಂತಿಲ್ಲಾ.
ಪುರುಷಪ್ರಧಾನ ವ್ಯವಸ್ಥೆಯೊಳಗೆ ಹೆಣ್ಣುಮಕ್ಕಳು ತನ್ನ ಸಂತೋಷವನ್ನು ಕಾಣುವ ಬಹುಮುಖ್ಯವಾದ ಹಬ್ಬವೆಂದರು ತಪ್ಪಾಗಲಾರದು, ಈ ಹಬ್ಬದ ಹಿಂದೆ ಒಂದು ಆರ್ಥಿಕ ಸಂಸ್ಕೃತಿ ಮತ್ತು ತಳ ಸಮುದಾಯಗಳು ಆರ್ಥಿಕ ಭದ್ರತೆಯು ಅಭಿವೃದ್ಧಿಯೂ ಸಹ ಅಡಕವಾಗಿದೆ. ಇಂತಹ ಹಬ್ಬಗಳು ಕೇವಲ ಹೆಣ್ಣುಮಕ್ಕಳಿಗಷ್ಟೇ ಸೀಮಿತವಾಗಿರದೆ ಸಣ್ಣಸಣ್ಣ ಕುಟುಂಬಗಳ ಬೀದಿವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಯ ಅಭಿಮುಖವಾಗಿವೆ. ಹೂ, ಹಣ್ಣು, ಸೊಪ್ಪು, ತರಕಾರಿ, ಈಗೆ ಏನೆಲ್ಲಾ ಹಬ್ಬದ ಅಗತ್ಯ ವಸ್ತುಗಳ ಖರೀದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆಯ ಸಾಧನಗಳಾಗಿವೆ.
ಮನೆಯ ಒಳಿತಿಗಾಗಿ ದುಡಿಯುವ ಗಂಡನಿಗೆ ಸಂಬಳ ಬಂದಿರಲಿ, ಬಾರದಿರಲಿ, ಮನೆಯವರಿಗೆ ಅರೋಗ್ಯ ಸರಿ ಇರಲಿ ಇಲ್ಲದಿರಲಿ ,ತಮ್ಮ ಭವಿಷ್ಯದ ಕೆಲಸಗಳು ಕುಂಟಿತವಾಗಿರಲಿ, ಸರಾಗವಾಗಿರಲಿ, ಸಂಪಾದನೆಯ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದಿರಲಿ, ಬೀಳದಿರಲಿ ಇಂದು ಯಾರ್ಯಾರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಯುತ್ತಿದೆಯೋ ಅವರೆಲ್ಲಾ ಶ್ರೀಮಂತರೇ, ಇವರಿಗೆ ಇನ್ನು ಮುಂದೆ ಸರ್ಕಾರದಿಂದ ಘೋಷಣೆಯಾಗುವ ಯಾವುದೇ ಮೂಲಭೂತ ಸವಲತ್ತುಗಳು ಸಿಗದಿದ್ದರೂ ಪರವಾಗಿಲ್ಲ.
ಇವರಿಗೆ ಲಕ್ಷ್ಮಿಯೇ ಎಲ್ಲ ಅಷ್ಟಐಶ್ವರ್ಯಗಳನ್ನು ಇವರ ಮನೆಗೆ ತಂದು ಸುರಿದುಬಿಡುತ್ತಾಳೆ ಅನ್ನುವುದು ಇವರ ನಂಬಿಕೆ. ಇದನ್ನು ಗಮನಿಸಿದರೆ ಬಹಳಷ್ಟು ನಗುಬರುತ್ತೆ. ಲಕ್ಷಿ ಬರುತ್ತಾಳೆ ಅನ್ನುವುದು ಇವರ ಪರಿಕಲ್ಪನೆಯೋ ಅಥವಾ ನಾವು ಎಷ್ಟು ಸಂಪಾದನೆ ಮಾಡಿಟ್ಟಿದ್ದೇವೆ ಎಂದು ತೋರಿಸುವ ಹಬ್ಬವೋ ನಮಗೆ ಅರ್ಥವಾಗದಾಗಿದೆ.
ಲಕ್ಷ್ಮಿ ಪೂಜೆಯ ಹಿಂದಿನ ದಿನ ತಾವು ಪೂಜೆಗೆ ಇಡುವ ಹೊಸ ನೋಟಿಗೂ ಪರದಾಡುವ ನಮ್ಮ ಜನರ ಮನಸ್ಥಿತಿ ನೋಡಿದರೆ ಇದೆಂತಹ ಹುಚ್ಚುತನವೆನಿಸುತ್ತದೆ. ಆ ಹೊಸ ನೋಟುಗಳನ್ನಾದರು ನಮ್ಮ ಲಕ್ಷ್ಮಿ ನೀಡಬಹುದಿತ್ತಲ್ಲವೇ ? ಇಂತಹ ಸಣ್ಣದೊಂದು ಯೋಚನೆಯು ನಮಗೆ ಬರಬಹುದಿತ್ತಲ್ಲವೇ ? ಮುಂಜಾನೆ ಎದ್ದರೆ ಅದೇ ಗಾರ್ಮೆಂಟ್ ಕೂಲಿ ಕೆಲಸ. ಸ್ವಲ್ಪ ತಡವಾದರೆ ಮತ್ತೆ ಮನೆಗೆ ವಾಪಾಸ್, ಇಷ್ಟೆಲ್ಲದರ ನಡುವೆಯೂ ಈ ಆಡಂಬರ ಬೇಕಾ, ಯಾರದೋ ಮನೆಯಲ್ಲಿ ಹಣ ತುಂಬಿಟ್ಟು ಪೂಜೆ ಮಾಡಿದಂತೆ ಕಾಣುವ ಗ್ರಾಫಿಕ್ ಫೋಟೋಗಳು ಅದಕ್ಕೆ ಐಟಿ/ ಲೋಕಾಯುಕ್ತ/ income tax ದಾಳಿ / ಇದೆಲ್ಲಾ ನಾವೇ ಕೆರೆದು ಹುಣ್ಣು ಮಾಡಿಕೊಳ್ಳುವ ಕೆಲಸ ಅನಿಸುತ್ತಲ್ಲವೇ.? ಇದು ನಮ್ಮ ಸಂಸ್ಕೃತಿ ಇರಬಹುದು. ಆದರೆ ಒಂದು ಮಾತು ನೆನಪಿರಲಿ ಎಲ್ಲಿಯವರೆವಿಗೂ ಈ ದೇಶದ ಹೆಣ್ಣುಮಕ್ಕಳು ದೇವಾಲಯ ಗುಡಿ ಗುಂಡಾರಗಳ ಮುಂದೆ ಕ್ಯೂ ನಿಲ್ಲುವುದನ್ನು ಬಿಟ್ಟು ವೈಜ್ಞಾನಿಕವಾಗಿ ಯೋಚಿಸಿ ಗ್ರಂಥಾಲಯಗಳಲ್ಲಿ ಕುಳಿತು ಓದುವುದರಲ್ಲಿ ಮಗ್ನರಾಗಿರುತ್ತಾರೋ ಅಂದು ಈ ದೇಶ ಮೂಢನಂಬಿ ಕೆಯಿಂದ ಮುಕ್ತವಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ.
ಆದರೆ ಇಂದು ಇನ್ನೂ ಹೆಚ್ಚು ಹೆಚ್ಚು ಪ್ರಚೋದನಾಕಾರಿಯಾಗಿ ಹಲವಾರು ಹಬ್ಬ, ಪೂಜೆ, ಭಜನೆ ಎನ್ನುವ ಹೆಸರಲ್ಲಿ ಜನರ ಮೆದುಳಿಗೆ ಬೇಡಿಹಾಕುವ ಕೆಲಸ ಯಶಸ್ವಿಯಾಗಿ ನಡೆಯುತ್ತಲೇ ಇದೇ, ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಪಟ್ಟಭದ್ರಹಿತಾಶಕ್ತಿ ಮನಸ್ಸುಳ್ಳವರು, ಅದಕ್ಕೆ ಯಾವುದೇ ಅಪಾಯಬರದಂತೆ ತುಂಬಾ ಜಾಗರೂಕವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ, ಕುವೆಂಪು ಹೇಳಿದ್ದು ಇದನ್ನೇ ಪೂಜೆ ಮಾಡಿ, ಯಾರೂ ಬೇಡವೆನ್ನುವವರಿಲ್ಲಾ, ಆದರೆ ಪೂಜೆಯ ಹೆಸರಲ್ಲಿ ಮಧ್ಯವರ್ತಿ ದಲ್ಲಾಳಿಗಳು ಬೇಡ, ವಿಜ್ಞಾನದ ಮಾಸ್ಟರ್ ವಿಜ್ಞಾದ ವಿಷಯಲ್ಲಿ ಪಾಠಮಾಡುವ ಮೊದಲು, ವಿಜ್ಞಾನವನ್ನು ಅರಿಯಬೇಕಾಗಿದೆ, ಶಾಲೆಯಲ್ಲಿ ವಿಜ್ಞಾನದ ಪಾಠ ಮಾಡಿ ಮನೆಗೆ ಬಂದು ಅವೈಜ್ಞಾನಿಕ ವಿಚಾರಗಳಿಗೆ ತಲೆಕೆಡಿಸಿಕೊಂಡು ಕುಳಿತರೆ ವಿಜ್ಞಾನಕ್ಕೆ ಎಲ್ಲಿಯ ಆದ್ಯತೆ ? ಇದು ತುಂಬಾನೇ ವಿಷಾದಕರವಾದ ವಿಚಾರವಾಗಿದೆ, ಸ್ವಾಮಿ ವಿವೇಕಾನಂದರು ಹೇಳಿದ್ದು ಟೀಚರ್ ವಿಲ್ ಬಿ ಪಿಲ್ಲರ್ ಆಫ್ ದಿ ನೇಷನ್, ಕಿಲ್ಲರ್ ಆಫ್ ದಿ ನೇಷನ್. ಟೀಚರ್ ವಿಲ್ ಬಿ ಡೈರೆಕ್ಟರ್ ಆಫ್ ದಿ ನೇಷನ್, ಡ್ಯಾಮೇಜಾರ್ ಆಫ್ ದಿ ನೇಷನ್ ಎಂದಿರುವುದು ಇಂತಹ ವಿಚಾರಗಳನ್ನು ಕುರಿತೇ ಇರಬಹುದು.!
ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು, ವಿವೇಕಾನಂದ, ಪೆರಿಯಾರ್, ಎಲ್ಲರ ಮನಸ್ಥಿತಿಯು ಒಂದೇ ಆಗಿತ್ತು. ಆದರೆ ಇಂದು TV ಯಲ್ಲಿ ನಮ್ಮ ಭವಿಷ್ಯ ಹೇಳುವ ಜನರೇ ಜಾಸ್ತಿಯಾಗಿದ್ದಾರೆ. ವಿಪರ್ಯಾಸವೆಂದರೆ ಭವಿಷ್ಯ ಹೇಳುವವರಿಗೇ ಯಾರಿಂದ ಯಾವಾಗ ಪ್ರಾಣ ಹಾನಿಯಾಗಬಹುದು ಎನ್ನುವ ಭವಿಷ್ಯ ಮಾತ್ರ ಗೊತ್ತಿರುವುದಿಲ್ಲ. ಇದು ನಮ್ಮ ಸಮಾಜಕ್ಕೆ ಅಂಟಿರುವ ಮೂಢನಂಬಿಕೆಯ ಮಾನಸಿಕ ಜಾಡ್ಯವಾಗಿದೆ. ಪೆರಿಯಾರ್ ಹೇಳಿದ ಹಾಗೆ ಮೂಢರಾಗಬೇಡಿ. ವೈಜ್ಞಾನಿಕವಾಗಿ ಚಿಂತಿಸಿ ತಮ್ಮ ಮಕ್ಕಳಿಗೆ ವಿಜ್ಞಾನದ ಪಾಠ ಹೇಳಿ ಎಂದಿದ್ದಾರೆ. ದೇವರ ಮೌಢ್ಯತೆಯ ಪೂಜೆಯನ್ನು ಕುರಿತು ದೇವರಿಲ್ಲಾ ದೇವರಿಲ್ಲಾ ದೇವರಿಲ್ಲಾ, ದೇವರು ಇಲ್ಲವೇ ಇಲ್ಲಾ. ದೇವರನ್ನು ಸೃಷ್ಠಿಸಿದವನು ಮೂರ್ಖ, ಪೂಜಿಸುವವನು ಅಯ್ಯೋಗ್ಯ, ನಂಬುವವನು ಮುಟ್ಟಾಳ ಎಂದಿದ್ದಾರೆ. ಆದರೆ ನಾವು ಮಾತ್ರ ಅದೇ ಅವೈಜ್ಞಾನಿಕ ದಾರಿಯಲ್ಲೇ ನಡೆದಿದ್ದೇವೆ.
ಮೊದಲು ಗ್ರಾಮೀಣ ಭಾಗದ ಜನರಲ್ಲಿ ಈ ಹಬ್ಬದ ಪರಿಕಲ್ಪನೆಯೇ ಇರಲಿಲ್ಲ. ಆದರೆ ಇಂದು ಅಲ್ಲಿಯೂ ಇದು ತನ್ನ ನಾಲಿಗೆಯನ್ನು ಚಾಚಿದೆ. ದುರಂತವೆಂದರೆ ಹೊಲಗಳನ್ನು ಸಕಾಲಕ್ಕೆ ಉತ್ತು ಬಿತ್ತು ಹಸನು ಮಾಡುತ್ತಿದ್ದ ಈ ದೇಶದ ಬೆನ್ನೆಲುಬು ರೈತ ತನ್ನ ಕಾಯಕದಲ್ಲಿ ದೇವರನ್ನು ಕಾಣುತ್ತಿದ್ದ. ಅದಕ್ಕೆ ಕುವೆಂಪು ಸಾಹಿತ್ಯ ಪುಷ್ಠಿ ನೀಡುತ್ತಿತ್ತು ಹಾಗು ಎಲ್ಲರಿಗೂ ಎಚ್ಚರಿಕೆಯ ಮಾತುಗಳನ್ನು ತಿಳಿ ಹೇಳುತ್ತಿತ್ತು. ಆದರೆ ಇಂದು ಧರ್ಮ ಮತ್ತು ರಾಷ್ಟ್ರ ರಾಜಕಾರಣ ಮಾಡುವ ನೆಪದಲ್ಲಿ ಅಂತಹ ವೈಜ್ಞಾನಿಕ/ವೈಚಾರಿಕ ಕವಿಯನ್ನೇ,ಅವರ ವಿಚಾರಗಳನ್ನೇ ತಿರುಚುವ,ಅವರಿಗೆ ಅಪಮಾನ ಮಾಡುವ ಕೆಲವು ಪೀತ ಮನಸ್ಸುಗಳು ನಮ್ಮ ನಡುವೆಯೇ ಹುಟ್ಟಿಕೊಂಡಿವೆ, ಇದನ್ನು ಪ್ರಜ್ಞಾವಂತರಾದ ನಾವು ಅರಿಯಬೇಕಿದೆ.
ಕುವೆಂಪು ಹೇಳಿರುವ ಹಾಗೆ ಇಂತಹ ವೈಜ್ಞಾನಿಕ ಆಚರಣೆಗಳು ಜನಸಾಮಾನ್ಯರ ಮಾನಸಿಕ ವ್ಯವಸ್ಥೆಗೆ ಹಾಕಿರುವ ಒಂದು ಬೇಡಿ ಎಂದಿದ್ದಾರೆ. ಮೊದಲಿನಿಂದ ನಮ್ಮ ವ್ಯವಸ್ಥೆಯನ್ನೇ ಹಾಗೆಯೇ ಮಾಡಿದ್ದಾರೆ. ಉದಾಹರಣೆಗೆ ಐ.ಎ.ಎಸ್. ಐ.ಪಿ.ಎಸ್. ನಂತಹ ಅಧಿಕಾರಗಳು. ಯಾಕೆ ಮಾಡಿದ್ರು ?, ಇವುಗಳಲ್ಲೆಲ್ಲ ಬ್ರಾಹ್ಮಣರೇ ಹೆಚ್ಚು ಪಾಸಾಗ್ತಾರೆ ಹೇಳಿ? ಅಲ್ಲಿ ಪ್ರಶ್ನೆಗಳನ್ನುಕೇಳೋದೂ ಹಾಗೇನೇ, ಬ್ರಾಹ್ಮಣರು ಮಾತ್ರ ಉತ್ತರಿಸುವಂಥ ಪ್ರಶ್ನೆಗಳನ್ನು ಶೂದ್ರರಿಗೆ ಕೇಳಿದ್ರೆ ಬಹಳ ಕಷ್ಟವಾಗುತ್ತೆ ಅದಕ್ಕೆ ನಾನು ಹೇಳೋದು, ಏಡಿ ಹಿಡಿಯೋದು ಹೇಗೆ ಅಂತ ಪ್ರಶ್ನೆ ಕೇಳಿ ಅಂತ. ಆಗ ಹಾರುವ ಉತ್ತರ ಹೇಳ್ತಾನೋ ಶೂದ್ರ ಹೇಳ್ತಾನೋ ಗೊತ್ತಾಗುತ್ತೆ. ವಿಶ್ವಾಮಿತ್ರ ಹೇಗಿದ್ದ, ಯಜ್ಞ ಯಾಗ ಅಂದ್ರೆ ಏನು ? ಇತ್ಯಾದಿ ಪ್ರಶ್ನೆಗಳನ್ನು ಕೇಳಿದ್ರೆ ಬ್ರಾಹ್ಮಣ ಸುಲಭವಾಗಿ ಉತ್ತರಿಸ್ತಾನೆ. ಶೂದ್ರನ ಕೈಲಿ ಆಗಲ್ಲ. ಅವರವರ ಪರಿಸರದ ಪ್ರಶ್ನೆಗಳನ್ನು ಕೇಳಿದ್ರೆ ಶೂದ್ರರೂ ಹೆಚ್ಚಾಗಿ ಪಾಸಾಗ್ತಾರೆ. ಅಲ್ಲಿತನಕ ಅದೆಲ್ಲ ಬ್ರಾಹ್ಮಣರ ಸ್ವತ್ತಾಗುತ್ತೆ. ಇದು ಒಂದು ರೀತಿಯ ಮಾನಸಿಕವಾದ ಗೇಮ್ ಎಂದರು ತಪ್ಪಾಗಲಾರದು. ಹಾಗೆಯೇ ಇಂತಹ ಹಬ್ಬಗಳು ಹೆಣ್ಣುಮಕ್ಕಳ ಸಂಭ್ರಮವಾದರು ಪೂಜೆ ಹೋಮ ಹವನಗಳ ಹೆಸರಲ್ಲಿ ಎಲ್ಲರನ್ನು ಮಾನಸಿಕವಾಗಿ ಹಿಡಿದಿಡುವ, ಅವೈಜ್ಞಾನಿಕತೆಯನ್ನು ಪಸರಿಸುವ ಒಂದು ಆಯಾಮವೆನ್ನಬಹುದು.
ಅಂಬೇಡ್ಕರ್ ರವರು ಹೇಳಿದ ಹಾಗೆ ನೀವು ದೇವರ ದೇಗುಲಕ್ಕೆ ಕೊಡುವ ಕಾಣಿಕೆಯನ್ನು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಕೊಡಿ ಎಂದಿದ್ದಾರೆ . ಆದರೆ ನಾವುಗಳು ಇಂದು ಮಕ್ಕಳ ಶಿಕ್ಷಣವಿರಲಿ ಮಕ್ಕಳಿಗೆ ವಿಜ್ಞಾನದ ಪಾಠ ಮಾಡುವ ಶಿಕ್ಷಕರನ್ನು ಇಂತಹ ಹಬ್ಬಗ ಳಲ್ಲಿ ನಮ್ಮ ಮನೆಗೆ ಕರೆದು ಉಪಚರಿಸುವ ಕಾಲ ಬಂದೊದಗಿದೆ, ಮಕ್ಕಳ ಶಾಲೆಯ ಶುಲ್ಕ ಕಟ್ಟದಿದ್ದರು ಪರವಾಗಿಲ್ಲ, ಅವರ ಹರಿದ ಶೂಗಳು, ಬಟ್ಟೆಗಳನ್ನು ನಾವು ದಿನ ನಿತ್ಯ ಗಮನಿಸುತ್ತಿದ್ದರು ಅದರ ಅರಿವೇ ಇಲ್ಲದಂತೆ ವರ್ತಿಸುತ್ತ ಇಂದು ಗರಿ ಗರಿಯಾದ ಹೊಸ ಹೊಸ ನೋಟುಗಳನ್ನು ಎಲ್ಲರ ಗಮನ ಸೆಳೆಯುವ ಹಾಗೆ ಇಟ್ಟು ಆಡಂಬರದ ಬದುಕನ್ನು ತೋರಿಸಿಕೊಳ್ಳುತ್ತೇವೆ.
ಅದಕ್ಕೆ ಬಸವಣ್ಣ ಹೇಳಿದ್ದು ಶಾಸ್ತ್ರವೆಂಬುದು ಸುಳ್ಳಿನ ಕಂತೆ, ಪುರಾಣವೆಂಬುದು ಪುಂಡರ ಗೋಷ್ಠಿ, ಕೈಲಾಸವೆಂಬುದೊಂದು ಹಾಳು ಬೆಟ್ಟ ಕಾಣಿರೋ, ಅಲ್ಲಿರುವ ಶಿವನು ದಟ್ಟ ಕಾಣಿರೋ, ಅಲ್ಲಿರುವ ಗಣಂಗಳು ಮೈಗಳ್ಳರು ಕಾಣಿರೋ, ಬೇಡೆನಗೆ ಕೈಲಾಸ, ಮಾಡುವುದು ಕಾಯಕ, ಕಾಯಕ ದೀಕ್ಷೆಯನ್ನು ಮಾಡು ನಾಡ ಅಂದರಕ್ಕೆ ಹಬ್ಬಿಸುವೆ ಕಾಯಕವೇ ಕೈಲಾಸ ಹೀಗೆ ಹೇಳಿದ ಬಸವಣ್ಣನ್ನನ್ನು ವಿದ್ಯಾವಂತರಾದ ನಾವುಗಳು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ನಾವುಗಳೆಲ್ಲಾ ಮತ್ತೆ ಮತ್ತೆ ಇಂತಹ ಮೂಢನಂಬಿಕೆಯ ಆಚರಣೆಗಳಿಗೆ ಹೆಚ್ಚು ಒತ್ತು ನೀಡುವುದೇ ಆದಲ್ಲಿ ನಮ್ಮಷ್ಟು ಮಾನಸಿಕ ಗುಲಾಮರು ಮತ್ತೊಬ್ಬರಿಲ್ಲ.
“ದೈಹಿಕ ಗುಲಾಮಗಿರಿ ಕೆಟ್ಟದ್ದು ನಿಜ ಆದರೆ ಮಾನಸಿಕ ಗುಲಾಮಗಿರಿ ಅದಕ್ಕಿಂತ ಹೀನಾಯವಾದದ್ದು, ಮಾನಸಿಕ ಗುಲಾಮಗಿರಿಗೆ ಸಿಕ್ಕವರ ಬದುಕು ಹಂದಿ ನಾಯಿಗಳಿಗಿಂತಲೂ ಕೀಳು” ಎಂಬ ಸಮಾಜ ಸುಧಾರಕರು ಹೇಳಿರುವ ಮಾತುಗಳನ್ನು ಅರಿಯಬೇಕಿದೆ. ನಮ್ಮದು ವಿಶ್ವ ಮಾನವ ಪ್ರೀತಿಯಾಗಬೇಕು, ಮತ ಮನುಜ ಮತವಾಗಬೇಕು, ಪಥ ವಿಶ್ವವಿಪಥವಾಗಬೇಕು, ಮಾನವ ವಿಶ್ವಮಾನವನಾಗಬೇಕು. ಬದುಕನ್ನು ಚೆನ್ನಾಗಿ ಸಾಗಿಸಿ, ಮಿತವಾದ ಖರ್ಚು, ಮಿತವಾದ ಊಟ, ಮಿತವಾದ ಮಾತು ಎಲ್ಲವೂ ಬದುಕಿನ ಬೆಳಕಿಗೆ ಕಾರಣ ಸೂತ್ರಗಳು, ನಿಮಗೆ ನೀವೇ ಬೆಳಕು ಎನ್ನುವ ಬುದ್ಧನ ಮಾತು ಇಂದಿಗೂ ಪ್ರಸ್ತುತವಾಗಿದ್ದು ಬುದ್ಧನ ಸಮಾನತೆಯ ವಿಜ್ಞಾನದ ಸಮಾಜ ನಿರ್ಮಾಣವಾಗಬೇಕಿದೆ.
ಮೂಢನಂಬಿಕೆಯನ್ನು ಬಿಡೋಣ – ವಿಜ್ಞಾನದ ಕಡೆಗೆ ನಡೆಯೋಣ