ಚಿತ್ತ ಭ್ರಮೆಯಲ್ಲೇ ಅರಳಿದ ಪ್ರತಿಭೆ ನಮ್ಮ "ಸಂಸ" - Mahanayaka

ಚಿತ್ತ ಭ್ರಮೆಯಲ್ಲೇ ಅರಳಿದ ಪ್ರತಿಭೆ ನಮ್ಮ “ಸಂಸ”

Udanta Shivakumar
03/07/2024

ಹಳಗನ್ನಡ ಸಾಹಿತ್ಯ ಶಾಸನಗಳನ್ನೂ ಇತರ ಇತಿಹಾಸ ಆಕರಗಳನ್ನೂ ಆಳವಾಗಿ ಅಭ್ಯಾಸಮಾಡಿ, ಕನ್ನಡ ಭಾಷೆಯಲ್ಲಿ ಹಿಂದೆಂದೂ ಕಾಣದಿದ್ದಂತ ಅಮೂಲ್ಯ ಐತಿಹಾಸಿಕ ನಾಟಕಗಳನ್ನು ಬರೆದ ಪ್ರಚಂಡ ಪ್ರತಿಭಾ ಶಾಲಿ ಸಂಸರು. ಆದರೆ ಅವರದು ದುರಂತದ ಛಾಯೆ ಆವರಿಸಿದ ಮಹಾಪ್ರತಿಭೆ. ತಾವು ಕ್ರಾಂತಿಕಾರರೆಂದು ಭಾವಿಸಿದ ಪೊಲೀಸರು ತಮ್ಮ ಮೇಲೆ ಕಣ್ಣಿಟ್ಟು ತಮ್ಮನ್ನು ಹಿಂಸಿಸಲು, ನಾಶಗೊಳಿಸಲು ನಾನಾ ತಂತ್ರಗಳನ್ನು ಹೂಡುತ್ತಿದ್ದಾರೆಂಬ ತೀವ್ರವಾದ ಭ್ರಮೆ ಅವರನ್ನು ಕಾಡುತ್ತಿತ್ತು. ಇದರಿಂದಾಗಿ ಅವರು ತೀರಾ ವಿಲಕ್ಷಣ ವ್ಯಕ್ತಿಯಾಗಿ ಮನೋವೇದನೆಯಿಂದ ಬಳಲಿದರು. ಈ ಭ್ರಮೆಯೇ ಅವರ ದುರ್ಮರಣಕ್ಕೂ ಕಾರಣವಾಯಿತು.


Provided by

“ಸಂಸ” ಎಂಬುದು ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್. ಅವರು ತಮ್ಮ ನಾಟಕಗಳಿಗಾಗಿ ಇಟ್ಟುಕೊಂಡ ಕಾವ್ಯನಾಮ. ಅವರು ತಮ್ಮನ್ನು ವೆಂಕಟಾದ್ರಿ ಪಂಡಿತ್ ಎಂದು ಕರೆದುಕೊಳ್ಳುತ್ತಿದ್ದದ್ದೂ ಉಂಟು. ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಅವರು 1898ರ ಜನವರಿ 13ರಂದು ಜನಿಸಿದರು.

ಹುಡುಗ ವೆಂಕಟಾದ್ರಿ ಕೊಳ್ಳೇಗಾಲ, ಮೈಸೂರುಗಳಲ್ಲಿ ಮೊದಲು ಶಾಲಾ ವಿದ್ಯಾಭ್ಯಾಸ ಮಾಡಿದ. 1914ರಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪಾಸ್ ಆಗದೆ, ವಿದ್ಯಾಭ್ಯಾಸವನ್ನು ಅಲ್ಲಿಗೆ ಮುಕ್ತಾಯಗೊಳಿಸಿದ. ಆದರೆ ತನ್ನ ಸಾಹಿತ್ಯ ಅಭ್ಯಾಸವನ್ನು ಬಿಡಲಿಲ್ಲ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಕರಿಬಸವಪ್ಪ ಶಾಸ್ತ್ರಿಗಳಲ್ಲಿ ಪ್ರೌಢ ಕನ್ನಡ ಕಾವ್ಯಗಳನ್ನು ಅಭ್ಯಾಸಿಸಿದ.

ಮುಂದೆ ಯುವಕ ವೆಂಕಟಾದ್ರಿ ಮೈಸೂರಿನ ಶಾರದಾ ವಿಲಾಸ ಹೈಸ್ಕೂಲಿನಲ್ಲೂ, ಮದರಾಸಿನ ಲಾಯಲಾ ಕಾಲೇಜಿನಲ್ಲೂ, ಮಂಗಳೂರಿನ ಅಲೋಷಿಯಸ್ ಕಾಲೇಜಿನಲ್ಲೂ ಕನ್ನಡ ಪಂಡಿತರಾಗಿ ಸ್ವಲ್ಪ ಕಾಲ ಕೆಲಸ ಮಾಡಿದರು.

ಸಂಸಾರ ಆತ್ಮಭಿಮಾನ ಅವರಿಗೂ ಇತರರಿಗೂ ಹಿಂಸೆಯಾಗುವಷ್ಟು ಹಿರಿದಾದದ್ದು. ಇದರಿಂದಾಗಿ ಅವರು ಯಾವ ಉದ್ಯೋಗದಲ್ಲಿಯೂ ಹೆಚ್ಚು ಕಾಲವಿರುವುದು ಸಾಧ್ಯವಾಗಲಿಲ್ಲ. ಅವರು ಒಮ್ಮೆ ಶಾಂತವಾಗಿರುವ ಫಿಜಿ ದ್ವೀಪಗಳಿಗೆ ಹೋಗಲು ನಿರ್ಧರಿಸಿದ್ದು, ಭಾರತದಲ್ಲಿ ಎಲ್ಲೂ ನಿಂತಲ್ಲಿ ನಿಲ್ಲದೆ ಸುತ್ತಿದ್ದು ಇದೇ ಕಾರಣದಿಂದ ಎನ್ನಬಹುದು. ಸುಮಾರು 1934ರಲ್ಲಿ ಕ್ವೆಟ್ಟಾ ಪಟ್ಟಣಕ್ಕೆ ಹೋಗಿ ಅಲ್ಲಿ ರಕ್ಷಣಾ ಪಡೆಯವರಿಗೆ ತಮಿಳನ್ನು ಕಲಿಸುವ ಉಪಾಧ್ಯಾಯನಾಗಿ ಕೆಲಸಕ್ಕೆ ಸೇರಿಕೊಂಡರು. ಇಲ್ಲಿ ಭೂಕಂಪವಾದ ಮೇಲೆ 1936ರ ಹೊತ್ತಿಗೆ ಮೈಸೂರಿಗೆ ಹಿಂದಿರುಗಿದರು.

ಆ ವೇಳೆಗಾಗಲೇ ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ, ಪೀಡಿಸುತ್ತಿದ್ದಾರೆ ಎಂಬ ಭ್ರಮೆ ಅವರ ಮನಸ್ಸನ್ನು ಹೊಕ್ಕಿತು. ಆದರೆ ವಾಸ್ತವವಾಗಿ ಯಾವ ಪೊಲೀಸನೂ ಇವರ ಮೇಲೆ ಕಣ್ಣಿಟ್ಟಿರಲಿಲ್ಲ. ಇವರ ಮೇಲೆ ಯಾವ ಆಪಾದನೆಯೂ ಇರಲಿಲ್ಲ. ಈ ಭ್ರಮೆಯ ಪರಿಣಾಮವಾಗಿ ಇವರ ಸಂಶಯ ಪ್ರವೃತ್ತಿಯಲ್ಲಿ ಅವರಿಗೆ ನಾಟಕಗಳನ್ನು ಮೆಚ್ಚಿ ಇವರ ಗೆಳೆತನ ಬಯಸಿ ಬಂದ ಕಥೆಗಾರ ಆನಂದ, ಜಿ.ಪಿ. ರಾಜರತ್ನಂ ಇಂಥವರನ್ನು ಕೂಡ ಪೊಲೀಸರ ಗುಪ್ತ ದಳದವರೆಂದು ಅನುಮಾನ ಪಟ್ಟು ಅವರ ಸಂಬಂಧವನ್ನು ಕಳೆದುಕೊಂಡರು.

ಈ ಚಿತ್ತ ಭ್ರಮೆ ಅವರ ಪ್ರತಿಭೆಯನ್ನು ಕುಂದಿಸಲಿಲ್ಲ. ಇದು ಅತ್ಯಂತ ಆಶ್ಚರ್ಯಕರ ಅಂಶ. ಅವರ ಕವನ, ನಾಟಕಗಳು ಇದಕ್ಕೆ ಸಾಕ್ಷಿ. ಅವರ ರಚಿಸಿದ ಗ್ರಂಥರಾಶಿ ದೊಡ್ಡದು. ಆದರೆ ಅವುಗಳಲ್ಲಿ ಕೆಲವು ಕವನಗಳು ಮತ್ತು ಆರು ನಾಟಕಗಳು ಮಾತ್ರ ಇಂದು ದೊರೆಯುತ್ತವೆ.
ಅವರು ವಾಚಿಸಿದ ಕೆಲವು ಕವನಗಳನ್ನು ಕೇಳಿದವರಿದ್ದಾರೆ. ಆದರೆ ಅವು ಲಿಖಿತ ರೂಪದಲ್ಲಿಲ್ಲ. ನಾಟಕ ಬರೆಯುವುದಕ್ಕಾಗಿ ಅವರು ಸಿದ್ಧ ಮಾಡಿ ಇಟ್ಟುಕೊಂಡಿದ್ದ ಟಿಪ್ಪಣಿಗಳು ದೊರೆತಿವೆ. ತಾವು ಬರೆದಿದ್ದ ಕೆಲವು ನಾಟಕಗಳನ್ನು ಸಂಸರು ಬೆಂಕಿ ಹಚ್ಚಿ ಸುಟ್ಟುಬಿಟ್ಟರೆಂದು ಕೂಡ ತಿಳಿದು ಬಂದಿದೆ.

ಇಂಥ ಅನಾಹುತದಿಂದ ತಪ್ಪಿಸಿಕೊಂಡು ಪ್ರಕಟವಾದ ಕೃತಿಗಳು ಕೆಲವು ಮಾತ್ರ “ಕೌಶಲ” ಎಂಬ ಕತೆ 1914 ರಲ್ಲಿ ಎ ಎನ್ ಸ್ವಾಮಿ ಎಂಬ ಹೆಸರಲ್ಲೂ, “ಶ್ರೀಮಂತೋದ್ಯಾನ ವರ್ಣನಂ” ಎಂಬ ಕಾವ್ಯ 1918ರಲ್ಲಿ ವೆಂಕಟಾದ್ರಿ ಪಂಡಿತ ಎಂಬ ಹೆಸರಲ್ಲೂ, ಸರ್ ಎಂ. ವಿಶ್ವೇಶ್ವರಯ್ಯನವರನ್ನು ಕುರಿತ ಪದ್ಯಮಾಲಿಕೆ 1921 ರಲ್ಲಿ ಸಾಮಿ ಎಂಬ ನಾಮಾಂಕಿತದಲ್ಲೂ ಪ್ರಕಟವಾಗಿವೆ. ಇವಲ್ಲದೆ “ಸಂಸಪದಂ” ಎಂಬ ಕಾವ್ಯವೂ ಒಂದಿದೆ. ಇವರು ಸಂಸ ಹೆಸರಿನಲ್ಲಿ ಬರೆದ ಉಳಿದ ಕೃತಿಗಳು ಆರು ನಾಟಕಗಳು ಮಾತ್ರ: “ಸುಗುಣ ಗಂಭೀರ”, “ವಿಗಡ ವಿಕ್ರಮರಾಯ”, “ಬೆಟ್ಟದ ಅರಸು”, “ಬಿರುದಂತೆಂಬರ ಗಂಡ”, “ಮಂತ್ರ ಶಕ್ತಿ” ಮತ್ತು “ವಿಜಯ ನಾರಸಿಂಹ” ಈ ಆರು ನಾಟಕಗಳು ಮೈಸೂರಿನ ಯದುವಂಶದ ಅರಸರು ಮತ್ತು ಅವರ ಕಾಲದ ಆಗುಹೋಗುಗಳಿಗೆ ಸಂಬಂಧಿಸಿದವು.

ನಾಟಕಗಳಿಗಾಗಿ ಅವರು ರೂಪಿಸಿದ್ದು ಹಳೆಗನ್ನಡ ಮಿಶ್ರಿತವಾದ ಒಂದು ಅಸಾಮಾನ್ಯ ಭಾಷೆ. ಬಹುಶಃ ನಾಟಕಗಳ ಘಟನೆಗಳ ಕಾಲದ ವಾತಾವರಣವನ್ನು ಮೂಡಿಸಲು ಅವರು ಈ ತಂತ್ರವನ್ನು ಅವಲಂಬಿಸಿರಬಹುದು. ಈ ಭಾಷೆ ಅಸಾಮಾನ್ಯವಾದರೂ ಒಟ್ಟಿನಲ್ಲಿ ಅದು ಪ್ರೇಕ್ಷಕರಿಗೆ ಅರ್ಥವಾಗುತ್ತದೆ, ಅವರ ಮೇಲೆ ಪ್ರಭಾವ ಬೀರುತ್ತದೆ.

ಸಂಸರು ” ಇಂಡಿಯನ್ ಶೆರ್ಲಾಕ್ ಹೋಮ್ಸ್ ಇನ್ ಇಂಗ್ಲೇಂಡ್” ಇಂಗ್ಲಿಷ್ ಕಾದಂಬರಿಯನ್ನು ಬರೆದರು. ಅದನ್ನು ಎಡಿನ್ ಬರೋ ಪ್ರಕಟಣಾಲಯವೊಂದು ಪ್ರಕಟಿಸಲು ಒಪ್ಪಿತು. ಆದರೆ ಕರಾರಿನ ಶರತ್ತುಗಳು ಸಂಸರಿಗೆ ಒಪ್ಪಿಗೆಯಾಗದೆ ಅದು ಪ್ರಕಟವಾಗಲಿಲ್ಲ. ಸಂಸರು ಒಟ್ಟು 27 ನಾಟಕಗಳನ್ನು ಬರೆದಿದ್ದರೆಂದು ಊಹಿಸಿ ತರ್ಕಿಸಲಾಗಿದೆ.

ಸಂಸರಿಗೆ ಪೊಲೀಸರ ಪೀಡೆಯ ಭ್ರಮೆ, ಸಂದೇಹಗಳು ಅಸಹನೀಯವಾದಾಗ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲರಾದರು. ಕೊನೆಗೆ ಅವರು ಮೈಸೂರಿನಲ್ಲಿ ತಮ್ಮ ಕೊಠಡಿಯಲ್ಲಿ 1939ರ ಫೆಬ್ರವರಿ 14ರಂದು ಇಲಿ ವಿಷ ತೆಗೆದುಕೊಂಡು ಪ್ರಾಣಬಿಟ್ಟರು. ಅದಕ್ಕೆ ಮುಂಚೆ ಎರಡು ಕಾಗದಗಳನ್ನು ಬರೆದಿಟ್ಟಿದ್ದರು. ಒಂದು ಪೊಲೀಸರಿಗೆ, ಇನ್ನೊಂದು ಸಂಬಂಧಪಟ್ಟವರಿಗೆ ಆ ಪತ್ರಗಳಲ್ಲಿ ಪೊಲೀಸರ ಬಗೆಗೆ ಅವರಿಗಿದ್ದ ಕೋಪ, ದ್ವೇಷ, ಮೈಸೂರು ಅರಸರ ಬಗ್ಗೆ ಅವರಿಗಿದ್ದ ಗೌರವ, ಯಾವ ವಿಧವಾದ ಮತಧರ್ಮಗಳಲ್ಲೂ ಅವರಿಗೆ ನಂಬಿಕೆ ಇಲ್ಲದಿದ್ದದ್ದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

ವಿಷಮ ಬಾಳನ್ನು ಬಾಳುತ್ತಿದ್ದರೂ ಅವರು ಕನ್ನಡಕ್ಕೆ ಉತ್ತಮ ಮತ್ತು ವಿಶಿಷ್ಟ ರೀತಿಯ ಕೃತಿಗಳನ್ನು ಕೊಟ್ಟರು.

–ಉದಂತ ಶಿವಕುಮಾರ್

 


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ