ಔಷಧಿ ತರಲು  ತನ್ನ ಗ್ರಾಮದಿಂದ ಬೆಂಗಳೂರಿಗೆ 280 ಕಿ.ಮೀ. ಸೈಕಲ್ ನಲ್ಲೇ ತೆರಳಿದ ತಂದೆ - Mahanayaka
4:36 AM Thursday 23 - January 2025

ಔಷಧಿ ತರಲು  ತನ್ನ ಗ್ರಾಮದಿಂದ ಬೆಂಗಳೂರಿಗೆ 280 ಕಿ.ಮೀ. ಸೈಕಲ್ ನಲ್ಲೇ ತೆರಳಿದ ತಂದೆ

mysore anand
01/06/2021

ಮೈಸೂರು: ಲಾಕ್ ಡೌನ್  ನಡುವೆಯೇ ಮಗನಿಗೆ ಔಷಧಿ ತರಲು ತಂದೆ 280 ಕಿ.ಮೀ. ದೂರ ಸೈಕಲ್ ಪ್ರಯಾಣ ಮಾಡಿದ ಘಟನೆ  ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗಾಣಿಗನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಎಲ್ಲೋ ಉತ್ತರಪ್ರದೇಶಗಳಲ್ಲಿ ನಡೆಯುತ್ತಿರುವ ಮಾದರಿಯ ಘಟನೆಗಳು ಇದೀಗ ಕರ್ನಾಟಕದಲ್ಲಿಯೂ ಕಂಡು ಬರುತ್ತಿದೆ. ಗಾರೆ ಕೆಲಸ ಮಾಡುತ್ತಿದ್ದ ಆನಂದ್ ಎಂಬವರ ಮಗ ವಿಶೇಷ ಚೇತನವಾಗಿದ್ದು,  ಈತನಿಗೆ ಬೆಂಗಳೂರಿನ  ನಿಮಾನ್ಸ್ ಆಸ್ಪತ್ರೆಯಿಂದ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿತ್ತು.

ಈ ಔಷಧಿಯನ್ನು ನೀಡುವುದು ಒಮ್ಮೆ ತಪ್ಪಿದರೆ ಮತ್ತೆ 18 ವರ್ಷ ಆತನಿಗೆ ಔಷಧಿ ಕೊಡಬೇಕಾಗುತ್ತದೆ. ಆದರೆ, ಈ ನಡುವೆ ಲಾಕ್ ಡೌನ್ ಸಂದರ್ಭದಲ್ಲಿ ಮಾತ್ರೆ ಮುಗಿಯುತ್ತಾ ಬಂದಿದೆ. ಔಷಧಿ ತರಲು ವಾಹನಗಳಿಲ್ಲ. ಪೊಲೀಸರು ವಾಹನ ಸೀಜ್ ಮಾಡುತ್ತಾರೆ ಎಂದು ಹೆದರಿ ಯಾವುದೇ ವಾಹನದವರೂ ಬರುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಆನಂದ್ ಅವರು, ತಮ್ಮ ಮಗನಿಗಾಗಿ ಸೈಕಲ್ ಏರಿಯೇ ಬಿಟ್ಟಿದ್ದಾರೆ. ಭಾನುವಾರ ಮಾರ್ಗ ಮಧ್ಯೆ ಕನಕಪುರದಲ್ಲಿ  ತಂಗಿದ್ದಾರೆ. ಬಳಿಕ ಬೆಂಗಳೂರಿಗೆ ತೆರಳಿ ಔಷಧಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೊಂದು ವರದಿಯ ಪ್ರಕಾರ, ರಸ್ತೆ ಮಧ್ಯೆ ಪೊಲೀಸರಿಂದ ಆನಂದ್ ಅವರು ತೊಂದರೆಗೂ ಸಿಲುಕಿ ಏಟು ಕೂಡ ತಿಂದಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಆಸ್ಪತ್ರೆಯ ವೈದ್ಯರೋರ್ವರು ಆನಂದ್ ಅವರ ಕಾರ್ಯ ಕಂಡು ಅವರಿಗೆ 1 ಸಾವಿರ ರೂಪಾಯಿ ನೆರವು ನೀಡಿದ್ದಾರೆ ಎಂದೂ ವರದಿಯಾಗಿದೆ.

ಒಂದು ದಿನ ಮಗನಿಗೆ ಮಾತ್ರೆ ನೀಡದಿದ್ದರೆ, ಮತ್ತೆ 18 ವರ್ಷ ಮಾತ್ರೆ ನೀಡಬೇಕಾಗುತ್ತದೆ. ಈ ಅನಿವಾರ್ಯತೆಯಿಂದಾಗಿ ತಾನು ಬೇರೇನೂ ಯೋಚಿಸದೇ ಔಷಧಿ ತರಲೆಂದು ಹೋಗಿ ಬಂದೆ ಎಂಧು ಆನಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ