ಒಂದು ಆಕ್ಸಿಜನ್ ಸಿಲಿಂಡರ್ ಗಾಗಿ ಇಡೀ ದಿನ ಒದ್ದಾಡಿದ್ದೇನೆ | ಸಾಧುಕೋಕಿಲಾ ಆತಂಕ
ಬೆಂಗಳೂರು: ನನ್ನ ಅಣ್ಣನ ಮಗನಿಗೆ ಸಿಂಗಲ್ ಆಕ್ಸಿಜನ್ ತೆಗೆದುಕೊಳ್ಳಲು ಇಡೀ ದಿನ ಒದ್ದಾಡಿದ್ದೇನೆ ಎಂದು ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಸಾಧುಕೋಕಿಲಾ ಹೇಳಿದ್ದು, ಜನ ಸಾಮಾನ್ಯರ ಪಾಡೇನು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಚಿತ್ರವೊಂದರ ಮುಹೂರ್ತದಲ್ಲಿ ಪಾಲ್ಗೊಂಡಿದ್ದ ಸಾಧುಕೋಕಿಲ, ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದು, ತಮಗೆ ಆಗಿರುವ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ನನ್ನ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತ ಗುಣಮುಖವಾಗಿ 15 ದಿನಗಳಾಗಿದ್ದರೂ ಆತನಿಗೆ ಉಸಿರಾಟದ ಸಮಸ್ಯೆ ಬರುತ್ತಲೇ ಇತ್ತು. ಆತನಿಗೆ ಆಕ್ಸಿಜನ್ ಕೊಳ್ಳಲು ತಾನು ಹೋಗಿದ್ದು, ಇಡೀ ದಿನ ಅಂದು ಆಕ್ಸಿಜನ್ ಸಿಗದೇ ನಾನು ಒದ್ದಾಡಿದ್ದೇನೆ. ಸೆಲೆಬ್ರೆಟಿಗಳಾದ ನಮ್ಮಂತಹವರಿಗೇ ಇಂತಹ ಸ್ಥಿತಿ ಬಂದಿದ್ದರೆ, ಇನ್ನು ಜನ ಸಾಮಾನ್ಯರಿಗೆ ಬಂದರೆ ಗತಿ ಏನು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಟಿವಿಯಲ್ಲಿ ತೋರಿಸುತ್ತಿರುವುದು ಎಲ್ಲವೂ ಸುಳ್ಳಲ್ಲ ಜನರು ಎಚ್ಚರಿಕೆಯಿಂದಿರಬೇಕಾಗಿದೆ. ನಿತ್ಯ ಲಕ್ಷಾಂತರ ಪ್ರಕರಣಗಳು ವರದಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಕೂಡ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಜನರೇ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.