ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ ಮೂವರು ಕೊವಿಡ್ ರೋಗಿಗಳು ಸಾವು
![oxygen cylinder](https://www.mahanayaka.in/wp-content/uploads/2021/05/oxygen-cylinder.jpg)
ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದಾಗಿ ಮೂವರು ಕೊರೊನಾ ರೋಗಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದ್ದು, ಕಳೆದ 24 ಗಂಟೆಗಳಲ್ಲಿ ಇನ್ನೂ ಹಲವು ಕೊವಿಡೇತರ ರೋಗಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಆಕ್ಸಿಜನ್ ಸಿಲಿಂಡರ್ ಗಳು ಖಾಲಿಯಾಗಿತ್ತು. ಇದರಿಂದ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆಕ್ಸಿಜನ್ ಖಾಲಿಯಾಗಿ ಉಸಿರಾಟಕ್ಕೆ ಪರದಾಡುತ್ತಿದ್ದ ರೋಗಿಗಳ ಕುಟುಂಬಸ್ಥರು ಬಟ್ಟೆಯಿಂದ ಗಾಳಿ ಬೀಸಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ, ರಾಜ್ಯದ ವೈದ್ಯಕೀಯ ಕ್ಷೇತ್ರದ ವೈಫಲ್ಯದ ಸ್ಥಿತಿಗೆ ಸಾಕ್ಷಿಯಾಗಿ ಮನಕಲಕುವಂತಿತ್ತು.
ಮೈಸೂರಿನಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ. ಕೊನೆಗೆ ಸಂಸದ ಪ್ರತಾಪ್ ಸಿಂಹ 50 ಜಂಬೂ ಸಿಲಿಂಡರ್ ಆಕ್ಸಿಜನ್ ಕಳುಹಿಸಿದ್ದಾರೆ. ಆದರೆ ಒಂದು ರಾತ್ರಿಗೆ 150 ಜಂಬೂ ಸಿಲಿಂಡರ್ ಗಳ ಅವಶ್ಯಕತೆ ಇದ್ದು, ಪ್ರತಾಪ್ ಸಿಂಹ ಕಳುಹಿಸಿದ ಆಕ್ಸಿಜನ್ ಒಂದು ರಾತ್ರಿಗೆ ಕೂಡ ಸಾಕಾಗುವುದಿಲ್ಲ ಎಂದು ಹೇಳಲಾಗಿದೆ.
ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಪೂರೈಸುತ್ತಿತ್ತು. ಜಿಲ್ಲಾಸ್ಪತ್ರೆಗೆ 280 ಜಂಬೂ ಆಕ್ಸಿಜನ್ ಬೇಕಾಗಿದೆ. ಆದರೆ ಮೈಸೂರಿನಿಂದ ಸದ್ಯ 50 ಜಂಬೂ ಸಿಲಿಂಡರ್ ವಿತರಣೆ ಮಾಡಲಾಗಿದೆ. ಚಾಮರಾಜನಗರ ಸಂಸದರು ಎಲ್ಲಿದ್ದಾರೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.