ಪಡುಮಾರ್ನಾಡು ಗ್ರಾ.ಪಂ. ಸಾಮಾನ್ಯ ಸಭೆ: ಪಂ. ನೌಕರನ ವಜಾಕ್ಕೆ ಬಿಜೆಪಿ ಸದಸ್ಯರ ಒತ್ತಾಯ; ವಜಾಗೊಳಿಸಿದರೆ ದಲಿತ ಸಂಘಟನೆಗಳಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ಕಲ್ಯಾಣಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಪಂಚಾಯತ್ ಡಾಟಾ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿರುವ ಕಿಶೋರ್ ಕರ್ತವ್ಯದ ಲೋಪದ ಆರೋಪ ಮಾಡಿ ಕರ್ತವ್ಯದಿಂದ ವಜಾಗೊಳಿಸುವಂತೆ ಒತ್ತಾಯಿಸಿರುವ ಘಟನೆ ನಡೆಯಿತು.
ಜಿ.ಪಂ.ನಿಂದ ಕ್ರಮ ತೆಗೆದುಕೊಳ್ಳಲು ಆದೇಶ ಬಂದಿದೆ ಅವರು ತಿಳಿಸಿ ಕರ್ತವ್ಯದಿಂದ ವಜಾಗೊಳಿಸಬೇಕೆಂದು ಪಟ್ಟು ಹಿಡಿದರು. ಇದೇ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಮಹಮ್ಮದ್ ಅಸ್ಲಾಂ ಮಾತನಾಡಿ, ಕರ್ನಾಟಕ ಪಂಚಾಯತ್ ರಾಜ್ ನಿಯಮ 93, ಅಧಿನಿಯಮ 113ರಲ್ಲಿ ಪಂ. ಸಿಬ್ಬಂದಿಯಾದ ಕಿಶೋರ್ ಅವರ ಕರ್ತವ್ಯ ಲೋಪದ ಬಗ್ಗೆ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲು ಪಂಚಾಯತ್ ಸಮಿತಿಗೆ ಅಧಿಕಾರ ಇರುತ್ತದೆ ಇಓ ಮೂಲಕ ಜಿ.ಪಂ. ಸಿಓ ಅವರಿಗೆ ತನಿಖೆ ಮಾಡುವಂತೆ ದೂರು ನೀಡಿರುವುದು ಸರಿಯಲ್ಲ. ಜಿಲ್ಲಾ ಪಂಚಾಯತ್ ನಿಂದ ವರದಿಯಲ್ಲಿ ಪಂಚಾಯತ್ ರಾಜ್ ಆಕ್ಟ್ ನ ಅಧಿನಿಯಮ 113 ರಂತೆ ಪಂಚಾಯತ್ ಸಮಿತಿಯೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದ್ದರಿಂದ ಅಧಿನಿಯಮ 113ರಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳದೆ ಜಿ.ಪಂ. ಸೂಚಿಸಿದ ಮೇರೆಗೆ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ವಾದಿಸಿದರು.
ರಮೇಶ್ ಶೆಟ್ಟಿ ಮಾತನಾಡಿ, ಕ್ಷುಲ್ಲಕ ಕಾರಣಕ್ಕಾಗಿ ವಜಾ ಮಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಖಂಡಿತ ನಿಮಗೆ ಶಾಪ ತಟ್ಟದೇ ಬಿಡುವುದಿಲ್ಲ. ಕೇವಲ ಕಾಂಗ್ರೆಸ್, ಬಿಜೆಪಿ ಎನ್ನುವ ಮೇಲಾಟಕ್ಕಾಗಿ ಅವರನ್ನು ಬಲಿಪಶು ಮಾಡುವುದು ಸರಿಯಲ್ಲ ತಿಳಿಸಿದರು.
ಇದಕ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಭಿನಂದನ್ ಬಳ್ಳಾಲ್, ಸದಸ್ಯರಾದ ಸತೀಶ್ ಕರ್ಕೆರ ಅವರು ಧ್ವನಿಗೂಡಿಸಿದರು.
ಸದಸ್ಯೆ ರಜನಿ ಮಾತನಾಡಿ, ಯಾವುದೇ ಆರೋಪ ಸಾಬೀತಾಗದೆ ನೌಕರ ಪರಿಶಿಷ್ಟ ಜಾತಿಯವನು ಎನ್ನುವ ಕಾರಣಕ್ಕೆ ಕರ್ತವ್ಯದಿಂದ ವಜಾ ಮಾಡುವುದು ಸರಿಯಲ್ಲ. ವಜಾ ಮಾಡುವುದಾದರೆ ಕರ್ತವ್ಯ ಲೋಪಕ್ಕೆ ಕಾರಣರಾದ ಪಿಡಿಒ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘಟನೆಗಳ ಮುಖಂಡರಿಂದ ಮನವಿ:
ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರು, ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘಟದ ಅಧ್ಯಕ್ಷರಾದ ಶಿವಾನಂದ್ ಬಳ್ಳಾಲ್‌ಬಾಗ್ ಹಾಗೂ ದಲಿತ ನಾಯಕರು ಆಗಮಿಸಿ ಪಂಚಾಯತ್ ಡಾಟಾ ಅಪರೇಟರ್ ಆಗಿ ಸೇವೆ ಸಲ್ಲಿಸುತ್ತಿರುವ ಕಿಶೋರ್ ಅವರ ಮೇಲೆ ಯಾವುದೇ ಕ್ರಮ ಜರುಗಿಸಬಾರದು ಎಂದು ಪಂಚಾಯತ್ ಅಧ್ಯಕ್ಷೆ ಸಿ.ಎಚ್.ಕಲ್ಯಾಣಿ ಅವರಿಗೆ ಮನವಿ ಪತ್ರ ನೀಡಿದರು.
ಇದೇ ವೇಳೆ ದಲಿತ ಸಂಘಟನೆ ಮುಖಂಡರಾದ ಕಿರಣ್ ಕುಮಾರ್ ಬೆಳ್ವಾಯಿ ಮಾತನಾಡಿ, ಪಂಚಾಯತ್ ಡಾಟಾ ಅಪರೇಟರ್ ಕಿಶೋರ್ ಅವರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾಗೊಳಿಸಬಾರದು ಮತ್ತು ಕೆಲಸದಿಂದ ತೆಗೆಯುವಂತಹ ನಿರ್ಣಯವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡರಾದ ಸದಾನಂದ ಪುಚ್ಚೇರಿ ಮಾತನಾಡಿ, ಪಂಚಾಯತ್ ಡಾಟಾ ಅಪರೇಟರ್ ಕಿಶೋರ್ ಅವರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾಗೊಳಿಬಾರದು. ವಜಾಗೊಳಿಸಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಸಂಸ ಮುಖಂಡರಾದ ನೀಲಯ್ಯ ಮಾತನಾಡಿ, ನಮ್ಮ ಮನವಿ ಪತ್ರವನ್ನು ಸ್ವೀಕರಿಸಲು ಪಿಡಿಒ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಕಾಯುವಂತೆ ಮಾಡಿದ್ದೀರಿ. ಮನವಿ ಸ್ವೀಕರಿಸಲು ನಿಮಗೆ ಇಷ್ಟು ಹೊತ್ತು ಬೇಕಾಯಿತಾ? ಎಂದು ಪಿಡಿಒ ಅವರನ್ನು ಪ್ರಶ್ನಿಸಿದರಲ್ಲದೆ, ನಮ್ಮ ಮನವಿಯನ್ನು ಸ್ವೀಕರಿಸಿ ನಂತರ ನಿಮ್ಮ ಸಭೆಯನ್ನು ಸಂಜೆಯವರೆಗೆ ಬೇಕಾದರೆ ಮುಂದುವರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಾನಂದ್ ಬಳ್ಳಾಲ್‌ಬಾಗ್, ಸತ್ಯಸಾರಮನಿ ಯುವಸೇನೆ ಖಜಾಂಚಿ ರಾಜೇಶ್ ನೆತ್ತೋಡಿ, ಆದಿದ್ರಾವಿಡ ಸಮಾಜ ಸೇವಾ ಸಂಘದ ಮುಖಂಡರಾದ ಪ್ರೇಮ್ ಬಳ್ಳಾಲ್‌ಬಾಗ್, ಪ್ರವೀಣ್ ಮುರಗೋಳಿ, ಭೀಮ ಘರ್ಜನೆ ಮುಖಂಡರಾದ ಪ್ರಭಾಕರ್, ಉದಯ್, ದಲಿತ ಮುಖಂಡರಾದ ಸುಜಿತ್ ಕಲ್ಲಮುಂಡ್ಕೂರು, ಸತೀಶ್ ಮೊದಲಾದವರು ಉಪಸ್ಥಿತರಿದ್ದರು.
ವಿಶೇಷ ಸಭೆ ಕರೆಯುವಂತೆ ತೀರ್ಮಾನ:
ಕೊನೆಗೆ ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲು ವಿಶೇಷ ಸಭೆ ಕರೆಯುವುದೆಂದು ತೀರ್ಮಾನಿಸಿ ಮುಂದಿನ ಮಂಗಳವಾರ ದಿನಾಂಕವನ್ನು ನಿಗದಿಪಡಿಸಲಾಯಿತು.
ಸಭೆಯಲ್ಲಿ ಪಿಡಿಒ ಭೀಮಾ ನಾಯ್ಕ್ , ಉಪಾಧ್ಯಕ್ಷರಾದ ಅಭಿನಂದನ್ ಬಳ್ಳಾಲ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರೈಲಿನಲ್ಲಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 1.48 ಕೋಟಿ ರೂ. ನಗದು, ಚಿನ್ನಾಭರಣ ವಶ
ಅಧಿಕಾರಕ್ಕಾಗಿ ಮಠ ಕಟ್ಟುತ್ತಿದ್ದಾರೆ: ಸಚಿವ ನಿರಾಣಿ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ವ್ಯಂಗ್ಯ
ಫುಟ್ ಬಾಲ್ ಪಂದ್ಯ ವೀಕ್ಷಿಸಲು ನೂಕು ನುಗ್ಗಲು: ಕಾಲ್ತುಳಿತದಲ್ಲಿ 6 ಸಾವು
‘ಸ್ಟುಪಿಡ್ ಸನ್ ಆಫ್ ಎ..’ ಎಂದು ಪತ್ರಕರ್ತನಿಗೆ ನಿಂದಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್