ಫಲಿಸಿದ ಸಖಿ ಸೆಂಟರ್ ಸಿಬ್ಬಂದಿಯ ಪ್ರಯತ್ನ: ಪತ್ನಿ ಹಾಗೂ ಮಗುವಿಗೆ ಆಶ್ರಯ ನೀಡಲು ಒಪ್ಪಿದ ಗಂಡನ ಮನೆಯವರು - Mahanayaka

ಫಲಿಸಿದ ಸಖಿ ಸೆಂಟರ್ ಸಿಬ್ಬಂದಿಯ ಪ್ರಯತ್ನ: ಪತ್ನಿ ಹಾಗೂ ಮಗುವಿಗೆ ಆಶ್ರಯ ನೀಡಲು ಒಪ್ಪಿದ ಗಂಡನ ಮನೆಯವರು

saki center
03/09/2022

ಉಡುಪಿ : ಪತಿಯ ಮರಣದ ದಿನವೇ ಪತ್ನಿ ಹಾಗೂ ಮಗುವನ್ನು ತಿರಸ್ಕರಿಸಿದ ಗಂಡನ ಕುಟುಂಬದ ಮನವೊಲಿಸುವಲ್ಲಿ ಉಡುಪಿಯ ಸಖಿ ಸೆಂಟರ್ ನ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.


Provided by

ಶುಕ್ರವಾರ ಉಡುಪಿಗೆ ಬಂದ ಸಾವನಪ್ಪಿರುವ ಪತಿ ಅಯ್ಯಪ್ಪ ಅವರ ಮನೆಮಂದಿ ಕಾನೂನು ಪ್ರಕ್ರಿಯೆ ನಡೆಸಿ ಸಂತ್ರಸ್ತೆ ಗೀತಾ ಹಾಗೂ ಆಕೆಯ ೧ ತಿಂಗಳ ಮಗುವನ್ನು ತಮ್ಮ ಜತೆಗೆ ಕರೆದೊಯ್ದಿದ್ದಾರೆ.

ಸಖಿ ಸೆಂಟರ್ನ ಸೆಂಟರ್ ಅಡ್ಮಿನಿಸ್ಟ್ರೇಟರ್ ಹಾಗೂ ಸಿಬ್ಬಂದಿ ವರ್ಗದವರ ಈ ಮಾನವೀಯ ಕಳಕಳಿಗೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಪ್ರಶಂಸೆ ವ್ಯಕ್ತ ಪಡಿಸಿದ್ದು, ಇದು ಸಂತ್ರಸ್ತೆಯ ಮನೋಬಲವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ ಎಂದಿದ್ದಾರೆ.


Provided by

ಏನಿದು ಪ್ರಕರಣ ? :

ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಬಾದಾಮಿಯ ಅಯ್ಯಪ್ಪ (28) ಎಂಬವರು ಕಳೆದ ಆ.25ರಂದು ಹಠಾತ್ ಹೃದಯಾಘಾತದಿಂದ ಮೃತ ಪಟ್ಟಿದ್ದರು. ಪ್ರೇಮ ವಿವಾಹದ ನೆಪವೊಡ್ಡಿ ಅವರ 20 ದಿನಗಳ ಮಗು ಹಾಗೂ ಬಾಣಂತಿ ಪತ್ನಿಯನ್ನು ಗಂಡನ ಕುಟುಂಬ ತಿರಸ್ಕರಿಸಿದ ಘಟನೆ ನಡೆದಿತ್ತು. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಅಯ್ಯಪ್ಪ ಅವರ ಪತ್ನಿ ಗೀತಾ ಹಾಗೂ ಆಕೆಯ20 ದಿನಗಳ ಮಗುವನ್ನು ಉಡುಪಿಯ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ದಾಖಲಿಸಿ, ಸಂತ್ರಸ್ತೆಗೆ ನ್ಯಾಯ ದೊರಕಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದರು.

ಫಲಿಸಿದ ಸಂಧಾನ:

ಪತ್ನಿ ಗೀತಾ ಹಾಗೂ ಆಕೆಯ ಮಗುವನ್ನು ಬಿಟ್ಟು, ಪತಿ ಮನೆಯವರ ಕೋರಿಕೆಯಂತೆ ಅಯ್ಯಪ್ಪ ಅವರ ಮೃತ ದೇಹವನ್ನು ಅವರ ಹುಟ್ಟೂರು ಬಾದಾಮಿಗೆ ಕಳುಹಿಸಲಾಗಿತ್ತು. ಇತ್ತ ಅಗಲಿದ ಗಂಡನ ಅಂತ್ಯಕ್ರಿಯೆಗೂ ಹೋಗಲಾಗದೆ, ಅತ್ತ ತವರು ಮನೆ ಹಾಗೂ ಗಂಡನ ಕುಟುಂಬದಿಂದ ತಿರಸ್ಕರಿಸಲ್ಪಟ್ಟ ಗೀತಾ ಅವರು ಅಘಾತ ಸ್ಥಿತಿಯಲ್ಲಿದ್ದರು. ಹೀಗಾಗಿ ಅವರಿಗೆ ಪ್ರೀತಿಯ ಸಾಂತ್ವನ ಹಾಗೂ ಆರೈಕೆಯ ಆವಶ್ಯಕತೆಯಿತ್ತು. ಇದನ್ನು ಗಮನಿಸಿದ ಸಖಿ ಒನ್ ಸ್ಟಾಫ್ ಸೆಂಟರ್ ನ ತಂಡ ಗೀತಾ ಅವರನ್ನು ಚೆನ್ನಾಗಿ ನೋಡಿಕೊಂಡು ಧೈರ್ಯ ತುಂಬಿದ್ದಾರೆ.

ತವರು ಮನೆಯವರ ಸ್ಪಂದನೆ ಇಲ್ಲದಿರುವುದರಿಂದ ಗಂಡನ ಕಡೆಯವರೊಂದಿಗೆ ನಿರಂತರ ಮಾತುಕತೆ ನಡೆಸಿ ಕೊನೆಗೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಉಡುಪಿ ಸಖಿ ಸ್ಟಾಪ್ ಸೆಂಟರ್ ಗೆ ಅಲ್ಲಿಯ ಊರಿನ ಮುಖಂಡ (ಗುರಿಕಾರ) ಅವರ ಜತೆಗೆ ಆಗಮಿಸಿದ ಅಯ್ಯಪ್ಪನ ಮನೆ ಮಂದಿ ಗೀತಾ ಹಾಗೂ ಆಕೆಯ ಮಗುವನ್ನು ಸ್ವೀಕರಿಸಲು ಒಪ್ಪಿದ್ದಾರೆ.

ಆಕೆಯನ್ನು ಪ್ರೀತಿಯಿಂದ ನೋಡಿಕೊಳ್ಳುವುದಾಗಿ, ಆಕೆ ಮತ್ತು ಮಗುವಿನ ಮುಂದಿನ ಜವಾಬ್ದಾರಿ ತಾವೇ ವಹಿಸಿಕೊಳ್ಳುವುದು ಎಂಬ ಭರವಸೆ ನೀಡಿದ್ದಾರೆ. ಗೀತಾ ಇನ್ನೂ ಚಿಕ್ಕ ವಯಸ್ಸಿನವಳಾಗಿರುವುದರಿಂದ ಆಕೆ ಮರು ಮದುವೆಯಾಗಲು ಇಚ್ಚಿಸಿದಲ್ಲಿ ಅದಕ್ಕೂ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ. ಉಡುಪಿ ಮಹಿಳಾ ಠಾಣೆಯ ಸಿಬ್ಬಂದಿಯ ಸಮಕ್ಷಮದಲ್ಲಿ ಕಾನೂನು ಪ್ರಕ್ರಿಯೆ ನಡೆಸಿದರು.

ಇದೊಂದು ಬಹಳ ಅಪರೂಪದ ಪ್ರಕರಣವಾಗಿದ್ದು, ಅಯ್ಯಪ್ಪ ಅವರ ಕುಟುಂಬವನ್ನು ದಡ ಸೇರಿಸಿದ ಸಖಿ ಸೆಂಟರ್ ನ ಸಿಬ್ಬಂದಿಗಳಿಗೆ ಎಷ್ಟು ಧನ್ಯವಾದ ತಿಳಿಸಿದರೂ ಸಾಕಾಗದು. ನೊಂದ ಮಹಿಳೆಯರ ಮೇಲೆ ಸರಕಾರಿ ಇಲಾಖೆಗಳು ಇಂತಹ ಕಾಳಜಿಯನ್ನು ತೋರಿಸಿದ್ದಲ್ಲಿ ಮಹಿಳಾ ದೌರ್ಜನ್ಯವನ್ನು ಯಶಸ್ವಿಯಾಗಿ ತಡೆಗಟ್ಟಬಹುದು ಎಂದು ವಿಶುಶೆಟ್ಟಿ ಅಂಬಲಪಾಡಿ
ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ