ಬ್ರೇಕಪ್ ಮಾಡಿಕೊಳ್ಳಲಿಲ್ಲ ಎಂದು ಪ್ರಿಯಕರನಿಗೆ ಪಾನೀಯದಲ್ಲಿ ವಿಷ ಬೆರೆಸಿ ಹತ್ಯೆ - Mahanayaka
9:13 PM Wednesday 11 - December 2024

ಬ್ರೇಕಪ್ ಮಾಡಿಕೊಳ್ಳಲಿಲ್ಲ ಎಂದು ಪ್ರಿಯಕರನಿಗೆ ಪಾನೀಯದಲ್ಲಿ ವಿಷ ಬೆರೆಸಿ ಹತ್ಯೆ

sharon raj greeshma
31/10/2022

ತಿರುವನಂತಪುರಂ: ಬ್ರೇಕಪ್ ಮಾಡಿಕೊಳ್ಳುವಂತೆ ಹೇಳಿದರೂ ಆತ ಬ್ರೇಕಪ್ ಮಾಡಿಕೊಳ್ಳಲಿಲ್ಲ. ನನ್ನ ಜಾತಕದಲ್ಲಿ ಮೊದಲ ಗಂಡ ಸಾಯುತ್ತಾನೆ ಎಂದು ಬರೆದಿದೆ ಎಂದು ಸುಳ್ಳು ಹೇಳಿ ಅವನ ಮನಸ್ಸು ಬದಲಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಆಕೆ ತೆಗೆದುಕೊಂಡ ಕೊನೆಯ ದಾರಿ ಮಾತ್ರ ಅತ್ಯಂತ ಕಠೋರವಾಗಿತ್ತು.

ಹೌದು..! ಕೇರಳದ ತಿರುವನಂತಪುರಂ ಮೂಲದ ಶರೋನ್ ರಾಜ್ ಎಂಬ ಯುವಕನ ನಿಗೂಢ ಸಾವು ಹೊಸ ತಿರುವು ಪಡೆದುಕೊಂಡಿದ್ದು, ಪ್ರಿಯತಮೆಯೇ ಆತನನ್ನು ಪಾನೀಯದಲ್ಲಿ ವಿಷ ಬೆರೆಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಗ್ರೀಷ್ಮಾ ಎಂಬಾಕೆಯೇ ತನ್ನ ಪ್ರಿಯಕರನನ್ನು ಕೊಂದ ಕೊಲೆಗಾತಿಯಾಗಿದ್ದಾಳೆ. ಗ್ರೀಷ್ಮಾ ಹಾಗೂ ಶರೋನ್ ರಾಜ್ ಕಳೆದ 1 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ನಡುವೆ ಗ್ರೀಷ್ಮಾ ಮನೆಯಲ್ಲಿ ಆಕೆಗೆ ಬೇರೆ ಸಂಬಂಧವನ್ನು ನೋಡಲು ಆರಂಭಿಸಿದ್ದರು. ಇಲ್ಲಿಂದ ಇವರಿಬ್ಬರ ನಡುವೆ ಸಮಸ್ಯೆಗಳು ಶುರುವಾದವು.

ಮನೆಯವರು ನೋಡಿದ ಸಂಬಂಧದ ಬಗ್ಗೆ ಗ್ರೀಷ್ಮಾಗೆ ಒಲವಿತ್ತು. ಹಾಗಾಗಿ ಶರೋನ್ ರಾಜ್ ಜೊತೆಗಿನ ಪ್ರೀತಿಯನ್ನು ಕೊನೆಗಾಣಿಸಲು ಆಕೆ ಪ್ರಯತ್ನಗಳನ್ನು ಆರಂಭಿಸಿದ್ದಳು. ಮೊದಲ ಹಂತವಾಗಿ  ಶರೋನ್ ಗೆ ಮೃಧುವಾಗಿ, ಪ್ರೀತಿಯನ್ನು ಕೊನೆಗಾಣಿಸೋಣ ಎಂದು ಹೇಳಿದ್ದಳು. ಆತ ಒಪ್ಪದೇ ಹೋದಾಗ, ನನ್ನ ಜಾತಕದಲ್ಲಿ ಮೊದಲ ಪತಿ ಸಾಯುತ್ತಾನೆ ಎಂದಿದೆ ಎಂದು ಆತನನ್ನು ಬೆದರಿಸಲು ಮುಂದಾಗಿದ್ದಾಳೆ. ಆದರೆ, ಗ್ರೀಷ್ಮಾನ ಮನಸ್ಸಿನಲ್ಲಿ ಏನಿದೆ ಅನ್ನೋದು ತಿಳಿಯದ ಶರೋನ್, ಅದಕ್ಕೆಲ್ಲ ನಾನು ಕ್ಯಾರೇ ಮಾಡಲ್ಲ ಎಂದಿದ್ದಾನೆ. ನಾನು ನಿನ್ನನ್ನು ತುಂಬಾನೆ ಪ್ರೀತಿಸುತ್ತೇನೆ ಎಂದಿದ್ದಾನೆ.

ಪ್ರೀತಿ ಕೊಂದ ಕೊಲೆಗಾತಿ:

ಬ್ರೇಕಪ್ ಮಾಡಿಕೊಳ್ಳುವ ತನ್ನ ಎಲ್ಲ ಪ್ರಯತ್ನಗಳು ವಿಫಲವಾದಾಗ ಗ್ರೀಷ್ಮಾ ಅಂತಿಮವಾಗಿ ಶರೋನ್ ರಾಜ್ ನನ್ನು ಮುಗಿಸಲು ಸ್ಕೆಚ್ ಹಾಕುತ್ತಾಳೆ.  ಶರೋನ್ ನನ್ನು ಮನೆಗೆ ಕರೆದ ಗ್ರೀಷ್ಮಾ, ಆಯುರ್ವೇದದ ಮಿಶ್ರಣದಲ್ಲಿ ಕಪಿಕ್ ಎಂಬ ಕೀಟನಾಶಕವನ್ನು ಕುಡಿಯುವಂತೆ ಮಾಡಿದ್ದಾಳೆ. ಅಕ್ಟೋಬರ್ 25ರಂದು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶರೋನ್ ಸಾವನ್ನಪ್ಪಿದ್ದಾನೆ.

ಎಂತಹ ಪ್ರೇಮಿ ಗೊತ್ತಾ ಶರೋನ್ ರಾಜ್:

ಗ್ರೀಷ್ಮಾ ನೀಡಿದ ಆಯುರ್ವೇದ ಕಷಾಯ ಸೇವಿಸಿದ ಬಳಿಕ ತಾನು ಅಸ್ವಸ್ಥಗೊಂಡಿದ್ದರೂ, ತಾನು ಸಾಯುವುದಕ್ಕೂ ಮೊದಲು ಪೊಲೀಸರು ಹೇಳಿಕೆ ದಾಖಲಿಸಲು ಬಂದಾಗ, ನನಗೆ ಯಾರ ಮೇಲೂ ಯಾವುದೇ ಅನುಮಾನ ಇಲ್ಲ ಎಂದು ಶರೋನ್ ರಾಜ್ ಹೇಳುತ್ತಾನೆ.

8 ಗಂಟೆಗಳ ವಿಚಾರಣೆ ಬಳಿಕ ಬಾಯ್ಬಿಟ್ಟ ಗ್ರೀಷ್ಮಾ:

ಶರೋನ್ ರಾಜ್ ಸಾವಿನ ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರಿಗೆ ಗ್ರೀಷ್ಮಾ ಮೇಲೆ ಅನುಮಾನ ಬಂದಿತ್ತು. ಆದರೆ, ಸತತವಾಗಿ ಆಯ್ಕೆಯನ್ನು ವಿಚಾರಣೆ ನಡೆಸಿದರೂ, ಆಕೆ ಬಾಯ್ಬಿಟ್ಟಿರಲಿಲ್ಲ. ಪೊಲೀಸರ ಅನುಮಾನ ಬಹಳ ಗಟ್ಟಿಯಾಗಿರುವುದರಿಂದ 8 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದ್ದು, ಈ ವೇಳೆ ತಾನೇ ಆತನನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾಳೆ.

ಖಾಸಗಿ ಚಿತ್ರ ಬಯಲಾಗುವ ಭೀತಿಯಿಂದ ಹತ್ಯೆ:

ಶರೋನ್ ರಾಜ್ ಬ್ರೇಕಪ್ ಗೆ ಒಪ್ಪದಿದ್ದರೂ, ಗ್ರೀಷ್ಮಾ ಆತನಿಂದ ಬ್ರೇಕಪ್ ಮಾಡಿ, ಮನೆಯವರು ನೋಡಿದ ಹುಡುಗನನ್ನು ಆಕೆ ಮದುವೆ ಆಗಬಹುದಿತ್ತು.ಆಕೆಗೆ ಕೊಲೆ ಮಾಡುವ ಅಗತ್ಯವೂ ಇರಲಿಲ್ಲ. ಆದರೆ, ಗ್ರೀಷ್ಮಾ ಹಾಗೂ ಶರೋನ್ ನ ಖಾಸಗಿ ಚಿತ್ರಗಳು ಶರೋನ್ ಬಳಿ ಇದ್ದವು.

ತಾನು ಈತನ ಜೊತೆಗೆ ಬ್ರೇಕಪ್ ಮಾಡಿಕೊಂಡು ಹೋದರೆ, ಈತ ತನ್ನ ಖಾಸಗಿ ಚಿತ್ರಗಳನ್ನು ಭಾವಿ ಪತಿಗೆ ನೀಡಬಹುದು ಅನ್ನೋ ಭಯವೇ ಶರೋನ್ ರಾಜ್ ನ ಹತ್ಯೆಗೆ ಕಾರಣವಾಗಿದೆ ಎಂದು ಗ್ರೀಷ್ಮಾ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ