ಹೇನು ಕಚ್ಚಿ 12 ವರ್ಷದ ಬಾಲಕಿ ಸಾವು! | ಪೋಷಕರನ್ನೂ ಸಂಕಷ್ಟಕ್ಕೀಡು ಮಾಡಿದ್ದ ವಿಚಿತ್ರ ಪ್ರಕರಣ
12 ವರ್ಷದ ಮಗಳ ಹತ್ಯೆ ಆರೋಪ ಎದುರಿಸುತ್ತಿದ್ದ ತಂದೆ-ತಾಯಿಗೆ ಜಾಮೀನು ನೀಡಲಾಗಿದ್ದು, ಮಗಳ ವಿಚಿತ್ರ ಸಾವು ಅವರನ್ನು ಸಂಕಷ್ಟಕ್ಕೀಡು ಮಾಡಿತ್ತು. ಮೇರಿ ಕ್ಯಾಥರೀನ್ “ಕೇಟೀ” ಹಾರ್ಟನ್ ಮತ್ತು ಜಾನ್ ಜೋಸೆಫ್ “ಜೋಯಿ” ಯೋಜ್ವಿಯಾಕ್ ದಂಪತಿಗೆ ಸೋಮವಾರ ಜಾಮೀನು ನೀಡಲಾಗಿದೆ.
ಈ ದಂಪತಿಯ ಮೇಲೆ ಮಕ್ಕಳ ಕ್ರೌರ್ಯ ಮತ್ತು ಸೆಕೆಂಡ್ ಡಿಗ್ರಿ ಕೊಲೆ ಆರೋಪ ಇತ್ತು. ತಮ್ಮ ಸ್ವಂತ ಮಗಳನ್ನೇ ಇವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಇವರ ಮಗಳ ಸಾವಿಗೆ ನಿಜವಾದ ಕಾರಣ ತಿಳಿದ ಕಾರಣ ದಂಪತಿಗೆ ಜಾಮೀನು ನೀಡಲಾಗಿದೆ.
ಹೇನುಗಳು ಕಚ್ಚಿದ ಪರಿಣಾಮ ದಂಪತಿಯ ಮಗಳಾದ ಕೈಟ್ಲಿನ್ ಯೋಜ್ವಿಯಾಕ್ ಮೃತಪಟ್ಟಿದ್ದಾಳೆ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ದಂಪತಿಯನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.
ಹೇನುಗಳ ದಾಳಿಯ ಪರಿಣಾಮ ಬಾಲಕಿಯು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾಳೆ. ಬಾಲಕಿಗೆ ರಕ್ತ ಹೀನತೆ ಕೂಡ ಇತ್ತು ಎನ್ನಲಾಗಿದೆ. ಸಾವಿನ ಸಂದರ್ಭದಲ್ಲಿ ಬಾಲಕಿಯ ತಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹೇನುಗಳು ತುಂಬಿದ್ದವು ಎಂದು ಹೇಳಲಾಗಿದೆ. ಹೇನುಗಳು ಕಚ್ಚಿದ್ದರಿಂದಾಗಿ ಬಾಲಕಿಯ ರಕ್ತದಲ್ಲಿದ್ದ ಕಬ್ಬಿಣದ ಅಂಶ ಕಡಿಮೆಯಾಗಿದೆ. ಇದು ರಕ್ತ ಹೀನತೆಗೆ ಕಾರಣವಾಗಿದ್ದು, ರಕ್ತ ಹೀನತೆಯು ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.