ಪರಿಸರ ನಾಶಕ ಪಟಾಕಿ ದೆಹಲಿಯಲ್ಲಿ ಸಂಪೂರ್ಣ ನಿಷೇಧ!
ನವದೆಹಲಿ: ದೀಪಾವಳಿ ಅಂದರೆ, ಬೆಳಕಿನ ಹಬ್ಬ ಎಂದು ಹೇಳುತ್ತಾರೆ. ಆದರೆ, ರಾಶಿ ರಾಶಿ ಪಟಾಕಿಗಳನ್ನು ಸುಟ್ಟು ನಮ್ಮ ಪರಿಸರವನ್ನೇ ನಾಶ ಮಾಡುತ್ತಾರೆ. ಚೈನಾ ಮೂಲದ ಪಟಾಕಿಯನ್ನು ಭಾರತದ ಸಂಸ್ಕೃತಿ ಅನ್ನುವವರಿಗೇನು ಕೊರತೆ ಕೂಡ ಇಲ್ಲ. ದೆಹಲಿಯೊಳಗೆ ಪಟಾಕಿ ಸಿಡಿಸಿದ ಪರಿಣಾಮ ಕಳೆದ ಹಲವು ವರ್ಷಗಳಿಂದ ಜನರು ಉಸಿರಾಡಲು ಕೂಡ ಕಷ್ಟಪಡುವ ಸ್ಥಿತಿ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ದೆಹಲಿಯಲ್ಲಿ ಪಟಾಕಿ ಖರೀದಿ ಹಾಗೂ ಮಾರಾಟ ಎರಡನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ರಾಷ್ಟ್ರ ರಾಜಧಾನಿಯ ಹೊರಗೆ ಪಟಾಕಿಗಳನ್ನು ಬಳಸಲು ಬಯಸುವವರಿಗೂ ಸಹ ದೆಹಲಿಯೊಳಗೆ ಪಟಾಕಿ ಖರೀದಿ ಅಥವಾ ಮಾರಾಟಕ್ಕೆ ಅನುಮತಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.
ಪಟಾಕಿ ವ್ಯಾಪಾರಸ್ಥರ ಬಳಿ ಇರುವ ದಾಸ್ತಾನನ್ನು ನಗರದ ಹೊರಗೆ ಹೋಗಿ ಮಾರಾಟ ಮಾಡಲು ಅಥವಾ ಹೊರ ಭಾಗದಿಂದ ನಗರಕ್ಕೆ ಬಂದು ಪಟಾಕಿ ಖರೀದಿಸಲು ಅನುಮತಿ ನೀಡಬೇಕೆಂದು ಕೋರಿ 53 ಪಟಾಕಿ ತಯಾರಕರು ಹಾಗೂ ವ್ಯಾಪಾರಿಗಳು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಪಟಾಕಿ ಮಾರಾಟ ನಿಷೇಧ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಸುಪ್ರೀಕೋರ್ಟ್ ಆದೇಶ ಹಾಗೂ ಮಾರ್ಗಸೂಚಿ ಪರಿಶೀಲಿಸುವುದಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿನ ಪಟಾಕಿ ದಾಸ್ತಾನನ್ನು ನಗರದ ಹೊರಭಾಗಕ್ಕೆ ಅಥವಾ ಉತ್ತಮ ಹವಾಮಾನದ ಪ್ರದೇಶದ ಖರೀದಿದಾರರು ದೆಹಲಿಗೆ ಆಗಮಿಸಿ ಪಟಾಕಿ ಕೊಂಡುಕೊಳ್ಳುವುದು ಸುಪ್ರೀಂಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಈ ವಿಚಾರದಲ್ಲಿ ಅರ್ಜಿದಾರರು ಸ್ಪಷ್ಟನೆ ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು, ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.