ಹವ್ಯಾಸವೇ ಪ್ರಾಣಕ್ಕೆ ಕುತ್ತು ತಂದಿತು | ಪರೋಪಕಾರಿಯಾಗಿದ್ದ ಸ್ನೇಕ್ ಮುಸ್ತಫಾ ಹಾವಿಗೆ ಬಲಿ! - Mahanayaka

ಹವ್ಯಾಸವೇ ಪ್ರಾಣಕ್ಕೆ ಕುತ್ತು ತಂದಿತು | ಪರೋಪಕಾರಿಯಾಗಿದ್ದ ಸ್ನೇಕ್ ಮುಸ್ತಫಾ ಹಾವಿಗೆ ಬಲಿ!

senek musthafa
19/04/2021

ಪುತ್ತೂರು: ಈ ವ್ಯಕ್ತಿಯ ಹವ್ಯಾಸವೇ ಅವರ ಪ್ರಾಣಕ್ಕೆ ಸಂಚಕಾರ ತಂದಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ ಗ್ರಾಮದ ನಿವಾಸಿ ಎಂ.ಆರ್.ಮುಸ್ತಫಾ ಅವರು ಹಾವನ್ನು ಹಿಡಿಯುವ ವೇಳೆ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ನಡೆದಿದೆ.


Provided by

ಜನರಿಗೆ ಪರೋಪಕಾರ ಮಾಡುವಲ್ಲಿ ಹೆಸರು ವಾಸಿಯಾಗಿದ್ದ ಮುಸ್ತಫಾ ಅವರು ಹಲವಾರು ಹಾವುಗಳನ್ನು ಈ ಹಿಂದೆಯೂ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು. ಈ ಭಾಗದಲ್ಲಿ ಸ್ನೇಕ್ ಮುಸ್ತಫಾ ಎಂದೇ ಅವರು ಪ್ರಖ್ಯಾತಿ ಪಡೆದುಕೊಂಡಿದ್ದರು.

ಯಾರಾದರೂ ಸಂಕಷ್ಟದಲ್ಲಿದ್ದರೆ ಅವರಿಗೆ ಓಡೋಡಿ ಸಹಾಯ ಮಾಡುವ ಹವ್ಯಾಸವನ್ನು ಮುಸ್ತಫಾ ಅವರು ಹೊಂದಿದ್ದರು. ಅಪಘಾತದಲ್ಲಿ ಗಾಯಗೊಂಡ ಬಹಳಷ್ಟು ಜನರಿಗೆ ಮುಸ್ತಫಾ ಅವರು ತಕ್ಷಣಕ್ಕೆ ನೆರವಾಗಿದ್ದರು. ಇವರ ಗುಣದ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.


Provided by

ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಮುಸ್ತಫಾ ಅವರಿಗೆ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಹವ್ಯಾಸ ಇತ್ತು. ಈ ಬಾರಿಯೂ ಮನೆಯೊಂದರ ಕೋಳಿ ಗೂಡಿನಲ್ಲಿ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ನಾಗರ ಹಾವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಬಲೆಯನ್ನು ಕತ್ತರಿಯಿಂದ ಕತ್ತರಿಸುತ್ತಾ, ಹಾವನ್ನು ಬಿಡಿಸಲು ಅವರು ಯತ್ನಿಸಿದ್ದರು. ಆದರೆ, ಅವರು ನಿರೀಕ್ಷಿಸದ ರೀತಿಯಲ್ಲಿ ಹಾವು ಕೈಗೆ ಕಚ್ಚಿದೆ.

ಹಾವು ಕಚ್ಚಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದ್ದರಿಂದಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಅವರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ