ಎಲೆಕ್ಷನ್ ಬಗ್ಗೆ ಗಿಳಿ ಶಾಸ್ತ್ರ ಹೇಳುತ್ತಿದ್ದ ವ್ಯಕ್ತಿ ಜೊತೆಗೆ ಗಿಳಿಯ ಬಂಧನ

ಲೋಕಸಭಾ ಚುನಾವಣೆ ಬಗ್ಗೆ ಗಿಳಿ ಶಾಸ್ತ್ರ ಹೇಳುತ್ತಿದ್ದ ವ್ಯಕ್ತಿಯನ್ನು ಹಾಗೂ ಗಿಳಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.
81 ವರ್ಷದ ಸೆಲ್ವರಾಜ್ ಎಂಬಾತ ತಮಿಳುನಾಡಿನ ಕಡಲೂರು ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಭವಿಷ್ಯ ನುಡಿದಿದ್ದ. ಆತನ ಗಿಳಿ ತೆಗೆದುಕೊಟ್ಟ ಕಾರ್ಡ್ ಪ್ರಕಾರವಾಗಿ ಕಡಲೂರು ಕ್ಷೇತ್ರದಲ್ಲಿ ಪಿಎಂಕೆ ಅಭ್ಯರ್ಥಿ ಥಂಕರ್ ಬಚನ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದ.
ಪಿಎಂಕೆ ನಾಯಕ ಥಂಕರ್ ಬಚನ್ ಸ್ಥಳೀಯ ದೇವಾಲಯಕ್ಕೆ ಭೇಟಿ ನೀಡಿದ್ದಾಗ ಈ ಬಾರಿಯ ಚುನಾವಣೆಯ ಭವಿಷ್ಯವನ್ನು ಕೇಳಿದ್ದರು. ತನ್ನ ಪಂಜರದಿಂದ ಹೊರಬಂದ ಗಿಳಿ, ಬಚನ್‌ನ ಯಶಸ್ಸನ್ನು ಮುನ್ಸೂಚಿಸುವ ದೇವತೆಯ ಕಾರ್ಡ್ ಅನ್ನು ಆಯ್ಕೆ ಮಾಡಿತ್ತು. ಭವಿಷ್ಯವಾಣಿಯಿಂದ ಸಂತಸಗೊಂಡ ಬಚನ್ ಸೆಲ್ವರಾಜ್‌ಗೆ ಹಣ ನೀಡಿ ಅಲ್ಲಿದ್ದ ತೆರಳಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿತ್ತು.
ಈ ಘಟನೆಯ ಬಳಿಕ ವೀಡಿಯೋವನ್ನು ಗಮನಿಸಿದ ಪೊಲೀಸರು ಜ್ಯೋತಿಷಿ ಸೆಲ್ವರಾಜ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅರಣ್ಯ ಇಲಾಖೆಯ ನಿಯಮದ ಪ್ರಕಾರ ಗಿಳಿಯನ್ನು ಸೆರೆಯಲ್ಲಿಡುವುದು ಅಪರಾಧ ಎಂದು ಸೆಲ್ವರಾಜ್‌ಗೆ ಎಚ್ಚರಿಕೆ ನೀಡಿ, ಆತನನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಳಿಕ ವಶಪಡಿಸಿಕೊಂಡಿದ್ದ ಗಿಳಿಯನ್ನು ಅಧಿಕಾರಿಗಳು ಕಾಡಿಗೆ ಬಿಟ್ಟಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth