ಸರ್ಕಾರಿ ಬಸ್ ನ್ನು ನಂಬಿ ಕೆಟ್ಟ ಪ್ರಯಾಣಿಕರು: ಚಳಿಯಲ್ಲಿ ನಡುಗುತ್ತಾ ಬಸ್ ನಿಲ್ದಾಣದಲ್ಲಿ ಮಲಗಿದ ಪ್ರಯಾಣಿಕರು
ಚಿಕ್ಕಮಗಳೂರು: ನೂರಾರು ಪ್ರಯಾಣಿಕರಿದ್ದರೂ, ಸರ್ಕಾರಿ ಬಸ್ ಬಿಡದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಪ್ರಯಾಣಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಧ್ಯರಾತ್ರಿ ಬಸ್ ಗಾಗಿ ಪ್ರಯಾಣಿಕರು ಹೋರಾಟ ನಡೆಸುವಂತಾಯಿತು. ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರೂ ಅಧಿಕಾರಿಗಳು ಬಸ್ ಬಿಟ್ಟಿಲ್ಲ. ಇದರಿಂದಾಗಿ ಚಳಿಯಲ್ಲೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಮಲಗುವಂತಾಯಿತು.
ಬಸ್ ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು, ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ತಡರಾತ್ರಿ 2 ಗಂಟೆವರೆಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರೂ ಯಾವುದೇ ಬಸ್ ಗಳನ್ನು ಬಿಟ್ಟಿಲ್ಲ. ಹೀಗಾಗಿ ಚಳಿಯಲ್ಲಿ ನಡುಗುತ್ತಾ ಬಸ್ ನಿಲ್ದಾಣದಲ್ಲೇ ಪ್ರಯಾಣಿಕರು ಮಲಗುವಂತಾಯಿತು.
ಧರ್ಮಸ್ಥಳ, ಮಂಗಳೂರು, ಉಡುಪಿ ಪ್ರಯಾಣಿಕರ ನಿತ್ಯ ಗೋಳಾಟ ಇದಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಪ್ರಯಾಣಿಕರ ಪ್ರತಿಭಟನೆಯ ವೇಳೆ ಪೊಲೀಸರು ಹಾಗೂ ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆಯಿತು.