ಪಟಾಕಿ ಎಫೆಕ್ಟ್: ಗಂಟಲು ತುರಿಕೆ, ಕಣ್ಣು ತುರಿಕೆಯಿಂದ ತತ್ತರಿಸಿದ ದೆಹಲಿ ಜನತೆ | ಶುದ್ಧ ಗಾಳಿ ಇಲ್ಲದೇ ಪರದಾಟ

pataki
06/11/2021

ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ಈ ಬಾರಿಯೂ ಪಟಾಕಿಯಿಂದ ತೀವ್ರ ಹಾನಿಯಾಗಿದ್ದು, ಗಂಟಲು ತುರಿಕೆ, ಕಣ್ಣು ತುರಿಕೆ ಮೊದಲಾದ ಸಮಸ್ಯೆಗಳು ಜನರಲ್ಲಿ ಕಾಣಿಸಿಕೊಂದಿದೆ ಎಂದು ಹೇಳಲಾಗಿದ್ದು, ದೆಹಲಿ ಎನ್ ಸಿಆರ್ ಜನತೆ ಶುಕ್ರವಾರ ಬೆಳಿಗ್ಗೆ ಈ ಸಮಸ್ಯೆಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ.

ಗುರುವಾರ ಸಂಜೆಯಿಂದಲೇ ಪಟಾಕಿ ಭರಾಟೆ ಆರಂಭಗೊಂಡಿದ್ದು, ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರವಾಗಿ ಕುಸಿದಿದೆ. ವಿಪರೀತವಾಗಿ ಪಟಾಕಿ ಸಿಡಿಸಿದ ಪರಿಣಾಮವಾಗಿ ಪರಿಸ್ಥಿತಿ ಇನ್ನೂ ಕೂಡ ಹದಗೆಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ಸಂಜೆಯ ವೇಳೆಗೆ ಪ್ರತಿ ಕ್ಯುಬಿಕ್ ಮೀಟರ್ ಗೆ 243 ಮೈಕ್ರೋಗ್ರಾಮ್ ಗಳಷ್ಟಿದ್ದ ಪಿಎಂ 2.5 ಮಟ್ಟ ಶುಕ್ರವಾರ ಬೆಳಿಗ್ಗೆ 9 ಗಂಟೆಯ ವೇಳೆಗೆ ಪ್ರತಿ ಕ್ಯುಬಿಲ್ ಮೀಟರ್ ಗೆ 410 ಮೈಕ್ರೋಗ್ರಾಮ್ ನಷ್ಟ ಆಗಿದೆ. ಇದು ಪ್ರತಿ ಕ್ಯುಬಿಕ್ ಮೀಟರ್ ಗೆ 60 ರಷ್ಟಿರಬೇಕಾಗಿದ್ದ ಸುರಕ್ಷತೆಯ ಮಿತಿಗಿಂತಲೂ 7 ಪಟ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಶುಕ್ರವಾರದಂದು ಬೆಳಿಗ್ಗೆ 5 ಗಂಟೆ ವೇಳೆಗೆ ದೆಹಲಿ-ಎನ್ ಸಿಆರ್ ಭಾಗದಲ್ಲಿ ಪ್ರತಿ ಕ್ಯುಬಿಕ್ ಮೀಟರ್ ಗೆ 500 ಮೈಕ್ರೋಗ್ರಾಮ್ ಗಳಿಗೆ ಏರಿಕೆಯಾಗಿದ್ದು, ಬೆಳಿಗ್ಗೆ 9 ರ ವೇಳೆಗೆ 511 ಮೈಕ್ರೋಗ್ರಾಮ್ ಗಳಿಗೆ ಏರಿಕೆಯಾಗಿದೆ. ದೆಹಲಿ- ಎನ್ ಸಿಆರ್ ಭಾಗದಲ್ಲಿ ದಾಖಲಾಗಿರುವ ವಾಯುಗುಣಮಟ್ಟವನ್ನು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್ ಎಪಿ) ಪಿಎಂ2.5 ಹಾಗೂ ಪಿಎಂ10 ಮಟ್ಟದಲ್ಲಿನ ಎಮರ್ಜೆನ್ಸಿ ವಿಭಾಗದಲ್ಲಿ ಪಟ್ಟಿ ಮಾಡಿದ್ದು ಇನ್ನೂ 48 ಗಂಟೆಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಕಾಲ ಪ್ರತಿ ಕ್ಯುಬಿಕ್ ಮೀಟರ್ ಗೆ ಅನುಕ್ರಮಾವಗಿ 300 ಮೈಕ್ರೋಗ್ರಾಮ್ ಹಾಗೂ 500 ಮೈಕ್ರೋಗ್ರಾಮ್ ಗಳಷ್ಟು ಇರಲಿದೆ ಎಂದು ಅಂದಾಜಿಸಿದೆ.

ದೀಪಾವಳಿ ಪಟಾಕಿಗೆ ವಿರೋಧ ಯಾಕೆ ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದ್ದವು. ಪರಿಸರ ಮಾಲಿನ್ಯ ವಾಹನಗಳ ಹೊಗೆಯಿಂದಲೂ ಆಗುವುದಿಲ್ಲವೇ? ಹೊಸ ವರ್ಷದ ಸಂದರ್ಭದಲ್ಲಿ ಕೂಡ ಪಟಾಕಿ ಸಿಡಿಸುವುದಿಲ್ಲವೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ, ದೀಪಾವಳಿ ಸಂದರ್ಭದಲ್ಲಿ ಒಂದೇ ಬಾರಿಗೆ ಪ್ರತೀ ಮನೆಯಲ್ಲಿಯೂ ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯದ ಪ್ರಮಾಣ ಒಂದೇ ಬಾರಿಗೆ ಹೆಚ್ಚಳವಾಗುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ಪ್ರತೀ ಮನೆಯಲ್ಲಿಯೂ ಪಟಾಕಿ ಸಿಡಿಸುವುದಿಲ್ಲ. ಎಲ್ಲೋ ಒಂದೆರಡು ದೊಡ್ಡದೊಡ್ಡ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುತ್ತಾರೆ. ಹೀಗಾಗಿ ಆ ಸಂದರ್ಭದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಯಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ  ದೆಹಲಿಯಂತಹ ನಗರಗಳಲ್ಲಿ ಒಂದೇ ಬಾರಿಗೆ ಜನರು ದೊಡ್ಡ ಮಟ್ಟದ ಪಟಾಕಿ ಸಿಡಿಸಿದರೆ, ಜನರು ಅಶುದ್ಧ ಗಾಳಿಯನ್ನು ಸೇವಿಸಿ, ಪ್ರಾಣ ಹಾನಿಯಾಗುವಂತಹ ಅಪಾಯ ಕೂಡ ಇದರಿಂದ ಸಂಭವಿಸಬಹುದು. ಹೀಗಾಗಿಯೇ ಪಟಾಕಿ ನಿಷೇಧ ಮಾಡಲು ಸರ್ಕಾರಗಳು ಮುಂದಾಗುತ್ತಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version