ಪತ್ನಿ ಬಿಟ್ಟು ಹೋಗಿದಕ್ಕೆ ನೊಂದು ದೇವಸ್ಥಾನದಲ್ಲೇ ನೇಣಿಗೆ ಶರಣಾದ ಅರ್ಚಕ!
09/07/2021
ಚಿಕ್ಕೋಡಿ: ಪತ್ನಿ ಬಿಟ್ಟು ಹೋದಳು ಎಂದು ಅರ್ಚಕನೋರ್ವ ತಾನು ಪೂಜೆ ಮಾಡುತ್ತಿದ್ದ ದೇವಿಯ ಎದುರೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಿಂದ ವರದಿಯಾಗಿದೆ.
ಇಲ್ಲಿನ ಹುಕ್ಕೇರಿ ಪಟ್ಟಣದ ಲಕ್ಷ್ಮೀ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನದ ಅರ್ಚಕ 36 ವರ್ಷ ವಯಸ್ಸಿನ ಅಶೋಕ ಪೂಜೇರಿ ಎಂಬಾತ ತನ್ನ ಪತ್ನಿಯ ಜೊತೆಗೆ ದಿನನಿತ್ಯ ಜಗಳ ಮಾಡುತ್ತಿದ್ದು, ಈತನ ಜಗಳ ಸಹಿಸಲಾರದೇ ಪತ್ನಿ ಆತನನ್ನು ಬಿಟ್ಟು ತನ್ನ ತವರು ಮನೆಗೆ ಹೋಗಿದ್ದಳು ಎಂದು ಹೇಳಲಾಗಿದೆ.
ಪತ್ನಿ ತನ್ನನ್ನು ಬಿಟ್ಟು ಹೋದಳು ಎಂದು ಖಿನ್ನತೆಗೆ ಒಳಗಾಗಿದ್ದ ಅಶೋಕ, ತಾನು ಪೂಜೆ ಮಾಡುತ್ತಿದ್ದ ಲಕ್ಷ್ಮೀ ದೇವಸ್ಥಾನದಲ್ಲಿ ಲಕ್ಷ್ಮೀ ದೇವಿಯ ಎದುರಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಮೃತ ಅರ್ಚಕನಿಗೆ ಒಂದು ಗಂಡ ಹಾಗೂ ಎರಡು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹುಕ್ಕೇರಿ ಪಿಎಸ್ ಐ ಸಿದ್ದರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.