ಪತ್ನಿ ಮೃತಪಟ್ಟು 24 ಗಂಟೆಗಳೊಳಗೆ ಪತಿಯೂ ಸಾವು | ಸಾವಿನಲ್ಲೂ ಜೊತೆಯಾದ ದಂಪತಿ
ಬೆಳ್ತಂಗಡಿ: ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ 24 ಗಂಟೆಗಳ ಅಂತರದಲ್ಲಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದಲ್ಲಿ ನಡೆದಿದೆ.
58 ವರ್ಷ ವಯಸ್ಸಿನ ಸಾರಮ್ಮ ಹಾಗೂ ಅವರ ಪತಿ 68 ವರ್ಷ ವಯಸ್ಸಿನ ಇಬ್ರಾಹಿಂ ಮೃತಪಟ್ಟವರಾಗಿದ್ದು, ಜೂನ್ 22ರಂದು ಸಾರಮ್ಮ ಅವರು ಮೃತಪಟ್ಟಿದ್ದು, ಜೂನ್ 23 ರಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ರಾಹಿಂ ಅವರು ಮೃತಪಟ್ಟಿದ್ದಾರೆ.
ಜೂನ್ 19ರಂದು ಈ ದಂಪತಿಗೆ ಕೊರೊನಾ ದೃಢಪಟ್ಟಿತ್ತು. ಸಾರಮ್ಮ ಅವರನ್ನು ಮೊದಲು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಆ ಬಳಿಕ ಪತಿ ಇಬ್ರಾಹಿಂ ಅವರಿಗೆ ಹೃದಯ ಸಂಬಂಧಿ ಕಾಯಿಲೆ ತೀವ್ರಗೊಂಡಿತ್ತು. ಹೀಗಾಗಿ ಅವರನ್ನು ಕೂಡ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರಮ್ಮ ಮಂಗಳವಾರ ಮೃತಪಟ್ಟಿದ್ದು, ಪತಿ ಇಬ್ರಾಹಿಂ ಬುಧವಾರ ಮೃತಪಟ್ಟಿದ್ದಾರೆ. ಇವರಿಬ್ಬರೂ ಕೂಡ ಕೊವಿಡ್ ನಿಂದಲೇ ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಒಂದೇ ಕುಟುಂಬದ ಇಬ್ಬರನ್ನು ಏಕ ಕಾಲದಲ್ಲಿ ಕಳೆದುಕೊಂಡು ಕುಟುಂಬಸ್ಥರು ದುಃಖಿತರಾಗಿದ್ದಾರೆ.