ಪತ್ನಿಗೆ ಕೊವಿಡ್ ಪಾಸಿಟಿವ್ ಬಂತೆಂದು ಹೆದರಿದ ಪತಿ ಆತ್ಮಹತ್ಯೆಗೆ ಶರಣು!
29/05/2021
ಚಿತ್ರದುರ್ಗ: ಪತ್ನಿಗೆ ಕೊವಿಡ್ ಪಾಸಿಟಿವ್ ವರದಿ ಬಂದಿದ್ದು, ಇದರಿಂದ ಹೆದರಿದ ಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
31 ವರ್ಷ ವಯಸ್ಸಿನ ರಂಗನಾಥಪುರ ನಿವಾಸಿ ರಾಜು ಎಂಬವರು ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದಾರೆ. ಇವರ ಪತ್ನಿ ರಶ್ಮಿಗೆ ಮೇ 27ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ರಾಜು ವರದಿ ನೆಗೆಟಿವ್ ಬಂದಿತ್ತು.
ಕೊರೊನಾ ಪಾಸಿಟಿವ್ ಬಂದ ದಿನವೇ ಪತ್ನಿ ರಶ್ಮಿಯನ್ನು ದೇವರಕೊಟ್ಟ ಕೊವಿಡ್ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇದರಿಂದ ರಾಜು ಗಾಬರಿಗೊಂಡಿದ್ದರು ಎಂದು ಹೇಳಲಾಗಿದೆ.
ಪತ್ನಿ ಆಸ್ಪತ್ರೆಗೆ ದಾಖಲಾದ ಬಳಿಕ ತಮ್ಮ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಳಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.