ಪತ್ನಿಗೆ ಮಕ್ಕಳಾಗಲಿಲ್ಲ ಎಂದು ಪತಿ ಎಂತಹ ಘೋರ ಕೃತ್ಯ ನಡೆಸಿದ್ದಾನೆ ನೋಡಿ
ಲಕ್ನೋ: ಮಕ್ಕಳಾಗಲಿಲ್ಲ ಎಂದು ಆರೋಪಿಸಿ ಪತಿ ಹಾಗೂ ಪತಿಯ ಸಂಬಂಧಿಕರು ಮಹಿಳೆಯನ್ನು ಬಲಿ ನೀಡಿದ ಘೋರ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದ್ದು, ಮಂತ್ರವಾದಿಯ ಮಾತು ಕೇಳಿ ಪತಿಯ ಕುಟುಂಬಸ್ಥರು ಯುವತಿಯನ್ನು ಬಲಿ ನೀಡಿದ್ದಾರೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, 13 ವರ್ಷಗಳ ಹಿಂದೆ ಸಂತ್ರಸ್ತ ಶಾರದಾ ದೇವಿ ಯುವತಿಯ ಮದುವೆಯಾಗಿತ್ತು. ಆದರೆ ಈವರೆಗೆ ಅವರಿಗೆ ಮಕ್ಕಳಾಗಿರಲಿಲ್ಲ. ಮಕ್ಕಳಾಗಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಗಂಡನ ಸಂಬಂಧಿಕರು ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಶಾರದಾ ದೇವಿಯ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಶಾರದಾ ದೇವಿಯ ತವರಿಗೆ ಕರೆ ಮಾಡಿದ್ದ ಪತಿಯ ಕುಟುಂಬಸ್ಥರು ಶಾರದಾ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸುದ್ದಿಯಿಂದ ಆತಂಕಗೊಂಡು ಶಾರದಾ ಕುಟುಂಬಸ್ಥರು ತೆರಳಿದಾಗ ಕೊಳವೊಂದರಲ್ಲಿ ಶಾರದಾ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಶಾರದಾ ಅವರ ದೇಹಕ್ಕೆ ಕಬ್ಬಿಣದ ರಾಡ್ ಗಳನ್ನು ನುಗ್ಗಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಮಂತ್ರವಾದಿಯ ಮಾತು ಕೇಳಿ ಈ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಶಾರದಾ ದೇವಿಯನ್ನು ಕೊಂದರೆ, ಆಕೆಯ ಪತಿಗೆ ಬೇರೆ ವಿವಾಹವಾಗಿ ಮಗು ಜನಿಸುತ್ತದೆ ಎಂದು ಮಂತ್ರವಾದಿ ಹೇಳಿದ್ದು, ಇದರಿಂದ ಈ ಭೀಕರ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶಾರದಾ ದೇವಿಯ ಪತಿ ಹಾಗೂ ಅತ್ತೆಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂತ್ರವಾದಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.\