ಗರ್ಭಿಣಿ ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿದವ 17 ವರ್ಷದ ಬಳಿಕ ಅರೆಸ್ಟ್!
ಗದಗ: ಪತ್ನಿಯನ್ನು ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿದ ಪತಿಯನ್ನು 17 ವರ್ಷಗಳ ಬಳಿಕ ಬಂಧಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ನೇತೃತ್ವದಲ್ಲಿ ತನಿಖೆ ನಡೆಸಿದ ಲಕ್ಷ್ಮೇಶ್ವರ ಪೋಲಿಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೀರಯ್ಯ ಹಿರೇಮಠ ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಪತ್ನಿಯ ಶೀಲ ಶಂಕಿಸಿ 2004ರ ಡಿಸೆಂಬರ್ 16ರಂದು ಶಿರಹಟ್ಟಿ ತಾಲೂಕಿನ ಅಂಕಲಿ ಗ್ರಾಮದ ವೀರಯ್ಯ ಹಳ್ಳದ ಬಳಿಕ ಕರೆದುಕೊಂಡು ಹೋಗಿ ಗರ್ಭಿಣಿ ಪತ್ನಿ ಈರಮ್ಮಳನ್ನು ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿದ್ದಾನೆ.
ಈರಮ್ಮನನ್ನು ಈತ ಹತ್ಯೆ ಮಾಡಿದರೂ ಯಾರಿಗೂ ಗೊತ್ತಿರಲಿಲ್ಲ. 9 ದಿನಗಳ ಬಳಿಕ ಈರಮ್ಮನ ಶವ ಪತ್ತೆಯಾಗಿತ್ತು. ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ, ವೀರಯ್ಯ ನಾಪತ್ತೆಯಾಗಿದ್ದ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪೋಲಿಸ್ ಠಾಣೆಯ ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೀರಯ್ಯ ಹಿರೇಮಠ ಬಂಧಿಸಿದ್ದಾರೆ.